ಮಾನವೀಯ ಸೇವೆ ಮತ್ತು ಅಂಗವೈಕಲ್ಯ ವಲಯದಲ್ಲಿನ ಗಣನೀಯ ಕೊಡುಗೆಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಾರಾಯಣ ಸೇವಾ ಸಂಸ್ಥಾನ, ಕರ್ನಾಟಕದ ವಿಶೇಷಚೇತನ ವ್ಯಕ್ತಿಗಳಿಗೆ ಹೊಸ ಜೀವನ ಮತ್ತು ಆಶಾಕಿರಣ ಮೂಡಿಸಲು ಫೆಬ್ರವರಿ 2ರ ಭಾನುವಾರ ಬೆಂಗಳೂರು ನಗರದ ಜಯನಗರದ 2ನೇ ಬ್ಲಾಕ್‌ನ ಅಶೋಕ ಪಿಲ್ಲರ್ ಬಳಿಯ ಚಂದ್ರಸಾಗರ್ ಕಲ್ಯಾಣ ಮಂಟಪದಲ್ಲಿ ಉಚಿತ ಅಂಗಾಂಗ ಜೋಡಣೆಗಾಗಿ ಅಂಗ ಮಾಪನ ಶಿಬಿರ ಆಯೋಜಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಶಿಬಿರ ಉದ್ಘಾಟಿಸಲಿದ್ದಾರೆ ಎಂದು ನಾರಾಯಣ ಸೇವಾ ಸಂಸ್ಥಾನದ ಟ್ರಸ್ಟಿ ಮತ್ತು ನಿರ್ದೇಶಕ ದೇವೇಂದ್ರ ಚೌಬಿಯಾ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಮಂದಿ ಕೃತಕ ಅಂಗಾಂಗ ಜೋಡೆಣೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅಂಗವಿಕಲರಿಗೆ ವಿಶೇಷವಾಗಿ ಅಪಘಾತಗಳು ಅಥವಾ ಅನಾರೋಗ್ಯದಿಂದ ಕೈಕಾಲು ಕಳೆದುಕೊಂಡವರಿಗೆ ಪರಿಹಾರ ಒದಗಿಸಲು ಸಂಸ್ಥೆಯು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ಪದ್ಮಶ್ರೀ ಪುರಸ್ಕೃತ ಸಂಸ್ಥಾಪಕ ಕೈಲಾಶ್ ಮಾನವ್ ಮಾರ್ಗದರ್ಶನ ಮತ್ತು ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ನಾಯಕತ್ವದಲ್ಲಿ 40 ವರ್ಷಗಳಿಂದ ಸಂಸ್ಥೆ ಸಾರ್ವಜನಿಕ ಕಲ್ಯಾಣಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ. ಫೆಬ್ರವರಿ 2ರ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಚಂದ್ರಸಾಗರ್ ಕಲ್ಯಾಣ ಮಂಟಪದಲ್ಲಿ ತನ್ನ ಮೂರನೇ ಉಚಿತ ಅಂಗವೈಕಲ್ಯ ತಡೆಗಟ್ಟುವಿಕೆ ಮತ್ತು ನಾರಾಯಣ್ ಅಂಗ ಮಾಪನ ಶಿಬಿರವನ್ನು ಆಯೋಜಿಸುತ್ತಿದೆ” ಎಂದರು.
“ನಾರಾಯಣ ಸೇವಾ ಸಂಸ್ಥಾನದ ಅನುಭವಿ ಮೂಳೆ, ಪ್ರಾಸ್ಥೆಟಿಕ್ ತಜ್ಞರ ತಂಡ ವಿಶೇಷ ಚೇತನರನ್ನು ಪರೀಕ್ಷಿಸಲಿದೆ. ಉತ್ತಮ ಗುಣಮಟ್ಟದ, ಹಗುರವಾದ ಮತ್ತು ಬಾಳಿಕೆ ಬರುವ ನಾರಾಯಣ್ ಕೃತಕ ಅಂಗಗಳಿಗೆ ವ್ಯವಸ್ಥಿತ ಎರಕಹೊಯ್ದ ಮತ್ತು ಅಳತೆಯನ್ನು ಮಾಡಲಾಗುತ್ತದೆ. ಸುಮಾರು ಎರಡು ತಿಂಗಳ ನಂತರ, ಅಂಗಾಂಗ ಜೋಡಣಾ ಶಿಬಿರದ ಸಮಯದಲ್ಲಿ ನಿರ್ದಿಷ್ಟ ಅಳತೆಗಳಿಗೆ ಮಾಡ್ಯುಲರ್ ಕೃತಕ ಅಂಗಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ” ಎಂದರು.
“ಈ ಕಾರ್ಯಕ್ರಮದ ಸಂದರ್ಭದಲ್ಲಿ, ಟ್ರಸ್ಟಿ ದೇವೇಂದ್ರ ಚೌಬಿಯಾ, ಮಾಧ್ಯಮ ವಿಭಾಗದ ನಿರ್ದೇಶಕ ಭಗವಾನ್ ಪ್ರಸಾದ್ ಗೌರ್, ಆಶ್ರಮದ ಉಸ್ತುವಾರಿ ಮತ್ತು ಶಿಬಿರ ಸಂಯೋಜಕ ಖುಬಿಲಾಲ್ ಮೆನಾರಿಯಾ ಮತ್ತು ಮುಂಬೈ ಶಾಖೆಯ ಉಸ್ತುವಾರಿ ಲಲಿತ್ ಲೋಹರ್ ಶಿಬಿರದ ಪೋಸ್ಟರ್ ಅನಾವರಣಗೊಳಿಸಿಸುವರು” ಎಂದು ತಿಳಿಸಿದರು.
ಭಗವಾನ್ ಪ್ರಸಾದ್ ಗೌರ್ ಮಾತನಾಡಿ, “ಶಿಬಿರದಲ್ಲಿ ಭಾಗವಹಿಸುವ ವಿಶೇಷಚೇತನರಿಗೆ ಉಚಿತ ಆಹಾರ ಒದಗಿಸಲಾಗುತ್ತಿದೆ. ಜನರಲ್ ಮೋಟಾರ್ಸ್ ಈ ಶಿಬಿರದ ಸಿಎಸ್ಆರ್ ಪಾಲುದಾರರಾಗಿ ಬೆಂಬಲಿಸುತ್ತಿದೆ. ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಆಧಾರ್ ಕಾರ್ಡ್, ಅಂಗವಿಕಲ ಪ್ರಮಾಣಪತ್ರ ಮತ್ತು ತಮ್ಮ ಅಂಗವೈಕಲ್ಯವನ್ನು ತೋರಿಸುವ ಎರಡು ಛಾಯಾಚಿತ್ರಗಳನ್ನು ತರಬೇಕು” ಎಂದು ಸಲಹೆ ನೀಡಿದರು.
ಹೆಚ್ಚಿನ ವಿವರಗಳಿಗಾಗಿ, ವ್ಯಕ್ತಿಗಳು ಸಂಸ್ಥಾನದ ಸಹಾಯವಾಣಿ 70235-09999 ಅಥವಾ 9341200200ಕ್ಕೆ ಸಂಪರ್ಕಿಸಬಹುದು.
ಈ ಸುದ್ದಿ ಓದಿದ್ದೀರಾ? ಕೊಡಗು | ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿ; ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಎಸ್‌ಡಿಪಿಐ ಮನವಿ
ನಾರಾಯಣ ಸೇವಾ ಸಂಸ್ಥೆ ಕುರಿತು: 1985ರಲ್ಲಿ ಸ್ಥಾಪನೆಯಾದಾಗಿನಿಂದ, ನಾರಾಯಣ ಸೇವಾ ಸಂಸ್ಥೆಯು ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರಪತಿಗಳಿಂದ ಮಾನವ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಸಂಸ್ಥಾಪಕ ಕೈಲಾಶ್ ಮಾನವ್ ಮತ್ತು 2023ರಲ್ಲಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದ ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ಅವರು ಲಕ್ಷಾಂತರ ಅಂಗವಿಕಲ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವೈದ್ಯಕೀಯ ಆರೈಕೆ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಅಂಗವಿಕಲರಿಗಾಗಿ ಕ್ರೀಡಾ ಅಕಾಡೆಮಿಯ ಮೂಲಕ ಅವರು ವ್ಯಕ್ತಿಗಳನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಲಪಡಿಸಿದ್ದಾರೆ. ಸಂಸ್ಥಾನವು ಈವರೆಗೆ 40,000ಕ್ಕೂ ಹೆಚ್ಚು ಕೃತಕ ಅಂಗಗಳನ್ನು ಒದಗಿಸಿದೆ. ಸ್ಥಳೀಯ ದಾನಿಗಳ ಸಹಾಯದಿಂದ ಕರ್ನಾಟಕದಲ್ಲಿ ಸಾವಿರಾರು ಅಂಗವಿಕಲ ವ್ಯಕ್ತಿಗಳ ಜೀವನವನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದೆ.