ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸಂತೆ ಮೈದಾನದಲ್ಲಿ ಕೊಳಚೆ ನೀರು ನಿಂತಿರುವುದರಿಂದ ಜನ ಸಾಮಾನ್ಯರು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂತೆ ಮೈದಾನದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಸಂತೆ ದಿನ ಚಲ್ಲಿದ ತರಕಾರಿಗಳು ಕೊಳೆತು ದುರ್ವಾಸನೆ ಬೀರುತ್ತಿತ್ತಿದ್ದು, ಓಡಾಡುವ ದಾರಿಯಲ್ಲಿ ನೀರು ನಿಂತು ಕೆಸರಿನಂತಾಗಿದೆ. ಕಾಲಿಡುವುದಕ್ಕೂ ಆಗದ ದುಃಸ್ಥಿತಿ ನಿರ್ಮಾಣವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಬಿಡಲು ಇದೇ ಮಾರ್ಗದಲ್ಲಿ ಹೋಗಬೇಕಾಗಿದೆ. ಜೊತೆಗೆ ಹಗಲು ಹೊತ್ತಿನಲ್ಲೇ ಕೆಲವರು ಮದ್ಯಪಾನ ಮಾಡಿ ವ್ಯಾಪಾರ ಮಳಿಗೆಗಳ ಕೆಳಗಿನ ಕಟ್ಟೆಗಳ ಮೇಲೆ ಅರೆಬೆತ್ತಲೆಯಾಗಿ ಮಲಗಿರುತ್ತಾರೆ. ಇದರಿಂದಾಗಿ ಮಹಿಳೆಯರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಬಿಡಲು ಈ ಮಾರ್ಗದಲ್ಲಿ ಹೋಗಲು ಭಯಪಡುವಂತಾಗಿದೆ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಹಾರೋಹಳ್ಳಿ ಪಟ್ಟಣ ಪಂಚಾಯತಿ ಆದಾಯ ಕುಸಿತ; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
“ಕೆಲವರು ಇದೇ ಜಾಗದಲ್ಲಿ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಒಡೆದು ಹಾಕುತ್ತಾರೆ. ಮಕ್ಕಳು ಕರೆದುಕೊಂಡು ಓಡಾಡುತ್ತಿರುತ್ತೇವೆ. ಮಕ್ಕಳ ಕಾಲಿಗೆ ತಗುಲಿದರೆ ಗತಿಯೇನು? ಈ ಕುರಿತು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.