ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಾಟೆ, ಹಲ್ಲೆ, ಕೊಲೆ ಮುಂತಾದ ಘಟನೆಗಳು ನಡೆದಿವೆ. ಈ ಹಿನ್ನೆಲೆ, ಇನ್ನುಮುಂದೆ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಮೆರವಣಿಗೆ, ಡಿಜೆ ಸೌಂಡ್‌ಗೆ ಅನುಮತಿ ನೀಡದಂತೆ ನಗರದ ಎಲ್ಲ ಪೊಲೀಸರಿಗೂ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ, ಮೆರವಣಿಗೆ ಹೋಗುತ್ತಿದ್ದಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಶ್ರೀನಿವಾಸ್ ಎಂಬ ಕೊರಿಯರ್ ಬಾಯ್‍ಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಲಾಗಿತ್ತು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹಲಸೂರು, ಯಡಿಯೂರು, ಆಡುಗೋಡಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮೆರವಣಿಗೆ ವೇಳೆ ಸಾಲು ಸಾಲು ಗಲಾಟೆಗಳು ನಡೆದಿವೆ. ಹಬ್ಬ ಮುಗಿದು ಹಲವಾರು ದಿನ ಕಳೆದ ಬಳಿಕ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಈ ಸೂಚನೆಯ ಬಳಿಕ ಮೆರವಣಿಗೆಗೆ ಅನುಮತಿ ಕೋರಿ ಇದೀಗ 200ಕ್ಕೂ ಹೆಚ್ಚು ಮನವಿ ಪತ್ರಗಳು ಬಂದಿವೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭಾರೀ ಮಳೆಗೆ ನಲುಗಿದ ನಗರ; ಸಮಸ್ಯೆ ಪರಿಹರಿಸಲು ಬಿಬಿಎಂಪಿ ವಿಫಲ
ಪೊಲೀಸರ ಮಾಹಿತಿ ಪ್ರಕಾರ ನಗರದಲ್ಲಿ ಇನ್ನು 450 ಗಣಪತಿಗಳನ್ನು ಇಟ್ಟಿದ್ದಾರೆ. ಮೆರವಣಿಗೆ ವೇಳೆ ಗಲಾಟೆ, ಕೊಲೆ ನಡೆದಿರುವ ಹಿನ್ನೆಲೆ, ಪೊಲೀಸ್ ಇಲಾಖೆ ಇನ್ನುಮುಂದೆ ಅನುಮತಿ ಕೊಡದಿರಲು ನಿರ್ಧರಿಸಿದೆ.
ಒಂದು ವೇಳೆ, ನಿಯಮ ಮೀರಿ ಗಲಾಟೆ ಅಥವಾ ಇನ್ನಾವುದೇ ಘಟನೆ ನಡೆದರು ಅದಕ್ಕೆ ಠಾಣಾ ಇನ್ಸ್‌ಪೆಕ್ಟರ್ ಹೊಣೆಯಾಗುತ್ತಾರೆ. ಠಾಣೆಯ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಜರುಗಿಸುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.