ಭೂಮಿ, ವಸತಿ ಹಕ್ಕು ವಂಚಿತರಿಗೆ ಭೂಮಿ ಮತ್ತು ನಿವೇಶನದ ಹಕ್ಕು ದೊರೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ಭೂಮಿ ವಂಚಿತರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಘನತೆಯ ಬದುಕನ್ನ ಕಟ್ಟಿಕೊಡಲು ಹೋರಾಟ ಮಾಡಿಸಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿ ಅವರ ಆಶಯಗಳನ್ನು ಈಡೇರಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಹಿರಿಯ ಸಾಹಿತಿ, ಹೋರಾಟಗಾರ್ತಿ ಡಾ. ವಿಜಯಮ್ಮ ಹೇಳಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಭೂಮಿ, ವಸತಿ ಹಾಗೂ ನಿವೇಶನ ವಂಚಿತರು ಬೆಂಗಳೂರಿನಲ್ಲಿ ಸೋಮವಾರ ನಡೆಸಿದ ‘ಬರಿಹೊಟ್ಟೆ ಸತ್ಯಾಗ್ರಹ’ವನ್ನು ಅವರು ಉದ್ಘಾಟಿಸಿದರು. ದೊರೆಸ್ವಾಮಿ ಅವರ ಹೆಸರಿನಲ್ಲಿ ಸತ್ಯಾಗ್ರಹ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
“ಸ್ವಾತಂತ್ರ್ಯ ಸೇನಾನಿ, ನಮ್ಮ ಹೋರಾಟದ ಪ್ರೇರಣೆಯೂ ಆದ ಹಿರಿಯ ದೊರೆಸ್ವಾಮಿ ಅವರು ಇಂದು ದೈಹಿಕವಾಗಿ ನಮ್ಮ ಜೊತೆಗಿಲ್ಲ. ಆದರೆ, ಚೈತನ್ಯವಾಗಿ ಈ ಹೋರಾಟದಲ್ಲಿ ನಮ್ಮ ಜೊತೆಯೇ ಇದ್ದಾರೆ. ಅವರು ಹಚ್ಚಿದ ಸ್ವಾಭಿಮಾನದ ದೀಪ ನಮ್ಮೊಳಗೆ ಜೀವಂತವಾಗಿದೆ. ಅವರು ಕಲಿಸಿದ ಬದ್ಧತೆ ಮತ್ತು ಪ್ರಾಮಾಣಿಕತೆ ಈ ಚಳವಳಿಯ ಜೀವಾಳವಾಗಿದೆ” ಎಂದು ಹೇಳಿದರು.
“ದೊರೆಸ್ವಾಮಿ ಅವರು ಹೇಳಿದ ‘ಅಂತ್ಯೋದಯ’ದ ಕನಸು ಈ ಹೋರಾಟದ ಧ್ಯೇಯವಾಗಿದೆ. ಅವರು ತೋರಿದ ‘ಸತ್ಯಾಗ್ರಹದ’ ಮಾದರಿ ಈ ಹೋರಾಟದ ಹಾದಿಯಾಗಿದೆ. ದೊರೆಸ್ವಾಮಿ ಅವರ ಪ್ರೇರಣೆಯಲ್ಲಿ ಈ ಹೋರಾಟವನ್ನು ಕೊನೆ ಮುಟ್ಟುವ ತನಕ ಮುಂದಕ್ಕೆ ಒಯ್ಯುತ್ತೇವೆ. ಸರ್ಕಾರದ ಮುಂದೆ ಸಂಯಮದ ಜೊತೆ ಮತ್ತೊಮ್ಮೆ ನಮ್ಮ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ. ಬಡವರ ದನಿಯನ್ನು ಸಾವಧಾನವಾಗಿ ಕೇಳಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಿಂತು ಹೋದ ಬಡವರ ಕೆಲಸಕ್ಕೆ ಮರು ಚಾಲನೆ ನೀಡಿ ಎಂದು ಸರ್ಕಾರಕ್ಕೆ ಕೋರುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಕರಾಳ ಶನಿವಾರ | ರಾಜ್ಯದಲ್ಲಿ ಅಪಘಾತಗಳಿಂದ 37 ಸಾವು ; ಎಡಿಜಿಪಿ ಟ್ವೀಟ್
“ಸರ್ಕಾರ ನಮ್ಮ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಭೆ ಕರೆದು ಚರ್ಚಿಸುವ ತನಕ ಈ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ. ನಾವು ದುಡುಕುವುದಿಲ್ಲ. ಹಾಗೆಂದು ಉದ್ದೇಶ ಈಡೇರದೆ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ದೊರೆಸ್ವಾಮಿ ಅವರ ನೆನಪಿನಲ್ಲಿ ಪ್ರಮಾಣ ವಿಧಿ ಸ್ವೀಕರಿಸುತ್ತಿದ್ದೇವೆ” ಎಂದು ಹೇಳಿದರು.