ಇತಿಹಾಸವನ್ನು ತಿರುಚಿ ಪಠ್ಯದ ರೂಪದಲ್ಲಿ ಮತೀಯವಾದವನ್ನು ಹರಡುತ್ತಿರುವ ಇಂದಿನ ಅಪಾಯಕಾರಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಿರಿಯ ಲೇಖಕ ಬಿ.ಶ್ರೀಪಾದ್ ಭಟ್ ಅವರು ಬರೆದಿರುವ ‘ವಿಷವಟ್ಟಿ ಸುಡುವಲ್ಲಿ’ ಕೃತಿ ಶುಕ್ರವಾರ ಬಿಡುಗಡೆಯಾಯಿತು.
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳಾದ ಪ್ರೊಫೆಸರ್ ಸಬೀಹಾ ಭೂಮಿಗೌಡ ಅವರು ಈ ವಿಶೇಷ ಕೃತಿಯನ್ನು ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆಯ ಬಳಿಕ ಮಾತನಾಡಿದ ಪ್ರೊ. ಸಬೀಹಾ ಭೂಮಿಗೌಡ, ‘ಕೃತಿಯನ್ನು ಬಿಡುಗಡೆ ಮಾಡಿದ್ದು ನನಗೆ ಖುಷಿ ಮತ್ತು ಅಭಿಮಾನದ ಸಂಗತಿ. ಇಂದಿನ ವರ್ತಮಾನದಲ್ಲಿ ಮತೀಯ ವಿಷವನ್ನು ವಿವಿಧ ನೆಲೆಗಳಲ್ಲಿ ಜನರ ಮುಂದಿಡುವ ಪ್ರಜ್ಞಾಪೂರ್ವಕ ಮತ್ತು ವ್ಯವಸ್ಥಿತ ಹುನ್ನಾರಗಳು ನಡೆಯುತ್ತಲಿವೆ. ಇಂತಹ ಹೊತ್ತಿನಲ್ಲಿ ಶ್ರೀಪಾದ್ ಭಟ್ ಅವರು ಬರೆದಿರುವ ಈ ಕೃತಿ ನಮ್ಮೆಲ್ಲರ ಜವಾಬ್ದಾರಿಯನ್ನು ನೆನಪಿಸುವಂಥದ್ದು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ” ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿರುವ ಶ್ರೀಪಾದ ಭಟ್ಟರು ‘ವಿಷವಟ್ಟಿ ಸುಡುವಲ್ಲಿ’ ಕೃತಿಯ ಮತೀಯವಾದಿಕರಣದ ಮುಖವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಸಾಂಸ್ಕೃತಿಕ ಗುಲಾಮಗಿರಿ ರಾಜಕೀಯ ಗುಲಾಮಿಗಿರಿಗಿಂತ ಹೆಚ್ಚು ಅಪಾಯಕಾರಿ. ಹಿಂದಿನಿಂದಲೂ ನಮ್ಮ ಇತಿಹಾಸವನ್ನು ಪುರಾಣದ ರೀತಿಯಲ್ಲಿ ಬಿಂಬಿಸಲಾಗಿದೆ. ನಮ್ಮ ಮಕ್ಕಳಿಗೆ ಇತಿಹಾಸ ಎಂದರೆ ಮನರಂಜನೆಯ ಎನ್ನುವಂತೆ ತೋರಿಸಲಾಗುತ್ತಿದೆ. ಇತಿಹಾಸವನ್ನು ತಿರುಚುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಕಾಲಘಟ್ಟದಲ್ಲಿ ನಾವುಗಳು ನಡೆಸುವ ಚರ್ಚೆಗಳು ಯುವ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ತಲುಪುವ ಅಗತ್ಯವಿದೆ” ಎಂದರು.