ಸಂಬಳ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿ, ಆತನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡು ಮಾಲೀಕ ದರ್ಪ ಮೆರೆದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದೆ. ಆಂಧ್ರಪ್ರದೇಶದ ಶರೀಫ್ ಎಂಬಾತನ ಮೇಲೆ ಅಂಗಡಿ ಮಾಲೀಕ ಶೇಕ್ಷಾವಲಾ ಎಂಬಾತ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಯುವಕ ಪೊಲೀಸರಿಗೆ ದೂರು ನೀಡಿದ್ದು, “ಅಂಗಡಿ ಮಾಲೀಕ ಸಂಬಳ ಕೊಡುವುದಾಗಿ ತನ್ನನ್ನು ಕರೆಸಿಕೊಂಡು, ಬೆತ್ತದಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನನ್ನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೆ, ನನ್ನ ತಾಯಿಯ ಬಗ್ಗೆಯೂ ಅವಾಚ್ಯವಾಗಿ ನಿಂದಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಶರೀಫ್ ಮತ್ತು ಶೇಕ್ಷಾವಲಾ ಇಬ್ಬರು ಸಂಬಂಧಿಕರಾಗಿದ್ದಾರೆ. ಹಾಸಿಗೆ ಒಲಿಯುವ ಕೆಲಸಕ್ಕಾಗಿ ಶರೀಫ್ನನ್ನು ಆಂಧ್ರದಿಂದ ಶೇಕ್ಷಾವಲಾ ಕರೆಸಿಕೊಂಡಿದ್ದ. ಕಡಿಮೆ ಸಂಬಳ ಕೊಟ್ಟು, ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದ. ಹೀಗಾಗಿ ಶರೀಫ್ ಅಲ್ಲಿನ ಕೆಲಸ ತೊರೆದು ಬೇರೆಡೆ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ತಮ್ಮ ವಿರೋಧಿಗಳು ಅಥವಾ ತಾವು ದ್ವೇಷಿಸುವವರನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ತಿಂಗಳು ಬೆಂಗಳೂರಿನ ಕಾಡುಗೋಡಿಯ ಬೆಳತ್ತೂರು ಕಾಲೋನಿಯಲ್ಲಿ ಧನಂಜಯ್ ಎಂಬಾತನನ್ನು ಅರೆಬೆತ್ತಲೆಗೊಳಿಸಿ ಆತನ ಸ್ನೇಹಿತರೇ ಹಿಗ್ಗಾಮುಗ್ಗಾ ಥಳಿಸಿದ್ದರು.
ಇನ್ನು, ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಯುವಕ-ಯುವತಿ ಪ್ರೀತಿಸಿ ಊರು ತೊರೆದಿದ್ದ ಕಾರಣಕ್ಕೆ, ಯುವತಿಯ ಮನೆಯವರು ಯುವಕನ ಮನೆಗೆ ನುಗ್ಗಿ, ಆತನ ತಾಯಿನನ್ನು ಬೀದಿಗೆ ಎಳೆದುತಂದು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರು. ಪ್ರಕರಣದಲ್ಲಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದಲ್ಲ ಕಾರು ವ್ಯಾಪಾರಿ ಅರ್ಜುನ್ ಎಂಬಾತನನ್ನು ಮನೆಯಲ್ಲಿ ಕೂಡಿ ಹಾಕಿ, ಆತನನ್ನು ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿದ್ದ ಅಮಾನವೀಯ ಘಟನೆ ಮೇ 11ರಂದು ನಡೆದಿತ್ತು. ಆರೋಪಿ ರಮೇಶ್ನನ್ನು ಬಂಧಿಸಲಾಗಿದೆ.