ಪಟಾಕಿ ಅನ್‌ಲೋಡ್ ಮಾಡುತ್ತಿದ್ದ ವೇಳೆ ಪಟಾಕಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, 12 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.
ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ. ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ ಪರಿಣಾಮ, 4-5 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
#Breaking: At least 10 persons have been #charred to #death after fire broke out at a #firecracker godown near Attibele on #Bengaluru–#Hosur #highway on the #Karnataka–#TamilNadu border. @TOIBengaluru @NammaBengaluroo @WFRising @0RRCA @ECityRising https://t.co/4W2wv5qNMm pic.twitter.com/lDq18YaWIk
— Rakesh Prakash (@rakeshprakash1) October 7, 2023
ಪ್ರತಿ ವರ್ಷದಂತೆ ದೀಪಾವಳಿಗಾಗಿ ವಿಶೇಷ ಪಟಾಕಿ ಲೋಡ್ ಲಾರಿಯಿಂದ ಇಳಿಸುವ ಸಂದರ್ಭದಲ್ಲಿ ಈ ಅಚಾತುರ್ಯ ಸಂಭವಿಸಿದೆ. ಅಲ್ಲದೆ ಇನ್ನೂ ಕೆಲವರಿಗೆ ಗಾಯಗಳಾಗಿವೆ. ಘಟನೆ ಬಗ್ಗೆ ಮಾಹಿತಿ ತಿಳಿದ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಥಳೀಯರೂ ಕೂಡ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು, ಅಂಗಡಿ ಸುಟ್ಟು ಕರಕಲಾಗಿದೆ.
ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿ ಆಗುವುದರೊಂದಿಗೆ 1 ಕ್ಯಾಂಟರ್, 2 ಬೊಲೆರೋ, 4 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ದೊಡ್ಡ ಮಳಿಗೆ ಆಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೂ ಪಟಾಕಿ ಅಂಗಡಿ ದುರಂತ ಎಫೆಕ್ಟ್ ತಟ್ಟಿದ್ದು, ಅತ್ತಿಬೆಲೆ ಕಡೆ ತೆರಳುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
10 persons were killed after #Fire breaks out at a #firecracker shop in #Attibele on #Karnataka #TamilNadu border ; several fire tenders are at the spot. pic.twitter.com/eIeGCkJdGr
— Madhuri Adnal (@madhuriadnal) October 7, 2023
ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ‘ಬಾಲಾಜಿ ಕ್ರಾಕರ್ಸ್ ದಾಸ್ತಾನು ಮಳಿಗೆಗೆ ಕ್ಯಾಂಟರ್ ವಾಹನದಿಂದ ಪಟಾಕಿ ಇಳಿಸುವಾಗ ಅವಘಡ ಸಂಭವಿಸಿದೆ. ಕೂಡಲೇ ಮಳಿಗೆ ಮತ್ತು ಗೋದಾಮಿಗೆ ಬೆಂಕಿಯ ಜ್ವಾಲೆ ಆವರಿಸಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ” ಎಂದು ತಿಳಿಸಿದರು.
‘ಸದ್ಯ ಶೇ. 80ರಷ್ಟು ಬೆಂಕಿ ನಿಯಂತ್ರಣ ಮಾಡಲಾಗಿದೆ. ಘಟನೆಯಲ್ಲಿ ಮಳಿಗೆಯ ಮಾಲೀಕ ನವೀನ್‌ಗೂ ಸುಟ್ಟ ಗಾಯಗಳಾಗಿದೆ. ಬೆಂಕಿ ಸಂಪೂರ್ಣ ನಂದಿಸಿದ ಬಳಿಕ ಮಳಿಗೆ ಒಳಗೆ ಎಷ್ಟು ಜನ ಕಾರ್ಮಿಕರು ಸಿಲುಕಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಗಲಿದೆ. ಪರಿಶೀಲನೆಗಾಗಿ ಎಫ್.ಎಸ್.ಎಲ್ ಟೀಮ್ ಆಗಮಿಸಲಿದೆ. ಮಳಿಗೆ ಪರವಾನಗಿ ಬಗ್ಗೆಯೂ ಪರಿಶೀಲನೆ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.