ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುದು ಗ್ರಾಮದ ಅರೋಪಿ ಹಸನಬ್ಬ ಅವರಿಗೆ ಶಿಕ್ಷೆ ಪ್ರಕಟಿಸಿ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶರಾದ ಭಾಗ್ಯಮ್ಮ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಫರಂಗಿಪೇಟೆ ಶಾಖೆಯಿಂದ ಆರೋಪಿ ಹಸನಬ್ಬ ಅವರು 2012ರಲ್ಲಿ ಅಡವು ಸಾಲ ಪಡೆದುಕೊಂಡಿದ್ದರು. ಆರೋಪಿ ಬ್ಯಾಂಕಿನಿಂದ ಸಾಲ ಪಡೆದಕೊಂಡ ಬಳಿಕ ಸರಿಯಾದ ಸಮಯಕ್ಕೆ ಹಣ ಮರುಪಾವತಿಸದೆ ಸಾಲವನ್ನು ಸುಸ್ತಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆರೋಪಿ ವಿರುದ್ಧ ಸಹಕಾರಿ ಕಾಯ್ದೆಯನ್ವಯ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. 2019ರಲ್ಲಿ ಆರೋಪಿಯ ಆಸ್ತಿಯನ್ನು ಹರಾಜಿಗಿಡುವ ಸಂದರ್ಭದಲ್ಲಿ ಹಸನಬ್ಬ ಶಾಖೆಗೆ ಆಗಮಿಸಿ ಸಾಲದ ಭಾಗಶಃ ಬಾಕಿಗೆ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿತ್ತು.
2019ರಲ್ಲಿ ಇದೇ ಆರೋಪಿ ತನ್ನ ಆಸ್ತಿಯ ಹರಾಜಿಗಿಟ್ಟ ಸಂದರ್ಭದಲ್ಲಿ ನೀಡಲಾಗಿದ್ದ ಮನವಿ ಪತ್ರವನ್ನು ಹಾಗೂ ಸಾಲದ ತಖ್ತೆ ಸಹಿತ ದಾಖಲೆಗಳನ್ನು ಪರಿಗಣಿಸಿದ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆರೋಪಿ ಸದ್ರಿ ಪ್ರಕರಣದ ಅಪರಾಧಿ ಎಂದು ತೀರ್ಮಾನಿಸಿತು. ಚೆಕ್ ಅಮಾನ್ಯ ಪ್ರಕರಣದ ಅಪರಾಧಿ ಹಸನಬ್ಬ ಅವರು ಫಿರ್ಯಾದಿ ಬ್ಯಾಂಕಿಗೆ ₹2,50,000 ಪರಿಹಾರ ನೀಡಬೇಕು. ಜೊತೆಗೆ ₹10,000 ದಂಡ ಪಾವತಿಸಬೇಕು ಹಾಗೂ ಇದಕ್ಕೆ ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತು.
ಇದನ್ನು ಓದಿದ್ದೀರಾ? ಕೋಲಾರ | ನಗರಸಭೆಯ ಆಡಳಿತಾಧಿಕಾರಿ ಅವಧಿಯಲ್ಲಿನ ಬಿಲ್ ಬಗ್ಗೆ ಲೋಕಾಯುಕ್ತ ತನಿಖೆಗೆ ತೀರ್ಮಾನ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಪರ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.
