ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ-ಮೆಲ್ಕಾರ್ ನಡುವೆ ಬರುವ ‘ಬೋಳಂಗಡಿ’ ಪ್ರದೇಶದಲ್ಲಿ ಇನ್ನು ಮುಂದೆ ಎಲ್ಲ ಸಾರಿಗೆ ಬಸ್‌ಗಳು ಕಡ್ಡಾಯವಾಗಿ ನಿಲುಗಡೆ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಲ್ಲಡ್ಕ-ಮೆಲ್ಕಾರ್ ನಡುವೆ ಬರುವ ‘ಬೋಳಂಗಡಿ’ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸರಿಯಾಗಿ ನಿಲುಗಡೆ ನೀಡುತ್ತಿರಲಿಲ್ಲ. ಇದರಿಂದಾಗಿ ಸಾರ್ವಜನಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿತ್ತು. ಇದರಿಂದ ಕೊನೆಗೆ ಬೇಸತ್ತ ಕೆಲವು ಸ್ಥಳೀಯ ನಿವಾಸಿಗಳು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಮುಖತಃ ಭೇಟಿಯಾಗಿ ಇತ್ತೀಚೆಗೆ ದೂರನ್ನು ಸಲ್ಲಿಸಿದ್ದಲ್ಲದೇ, ತಮ್ಮ ನೋವನ್ನು ತೋಡಿಕೊಂಡಿದ್ದರು.
ಈ ಮನವಿಗೆ ಸ್ಪಂದಿಸಿದ ಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಜೂನ್ 18ರಂದು ಆದೇಶ ಹೊರಡಿಸಿ, “ಬೋಳಂಗಡಿ ಪ್ರದೇಶದಲ್ಲಿ ಇನ್ನು ಮುಂದೆ ಎಲ್ಲ ಸಾರಿಗೆ ಬಸ್‌ಗಳು ಕಡ್ಡಾಯವಾಗಿ ನಿಲುಗಡೆ ನೀಡಬೇಕು” ಎಂದು ಕೆಎಸ್‌ಆರ್‌ಟಿಸಿಯ ಪುತ್ತೂರು, ಧರ್ಮಸ್ಥಳ, ಸುಳ್ಯ, ಬಿಸಿ ರೋಡು, ಮಡಿಕೇರಿ ಘಟಕಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.

ಅಲ್ಲದೇ ಆದೇಶದಲ್ಲಿ, “ಕಲ್ಲಡ್ಕ-ಮೆಲ್ಕಾರ್ ನಡುವೆ ಬೋಳಂಗಡಿಯೆಂಬ ಸ್ಥಳದಲ್ಲಿ ಸಾರ್ವಜನಿಕ ಪ್ರಯಾಣಿಕರನ್ನು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿಲುಗಡೆಯನ್ನು ನೀಡದಿರುವ ಬಗ್ಗೆ ಸಾರ್ವಜನಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ದೂರನ್ನು ನೀಡಿರುತ್ತಾರೆ. ಸದರಿ ದೂರನ್ನು ಪರಿಶೀಲಿಸಲಾಗಿದೆ. ಪುತ್ತೂರು- ಸ್ಟೇಟ್ ಬ್ಯಾಂಕ್ ಹಾಗೂ ವಿಟ್ಲ- ಸೇಟ್ ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ಸಾರಿಗೆಗಳು ಕಲ್ಲಡ್ಕ-ಮೆಲ್ಕಾರ್ ನಡುವೆ ಬರುವ ಬೋಳಂಗಡಿಯೆಂಬ ಸ್ಥಳದಲ್ಲಿ ಕಡ್ಡಾಯವಾಗಿ ನಿಲುಗಡೆಯನ್ನು ಕಲ್ಪಿಸಿ ಸಾರ್ವಜನಿಕ ಪ್ರಯಾಣಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಹತ್ತಿಸಿ/ ಇಳಿಸಿ ಕಾರ್ಯಾಚರಣೆ ಮಾಡುವಂತೆ ಆದೇಶಿಸಲಾಗಿದೆ. ಯಾವುದೇ ದೂರುಗಳಿಗೆ ಅವಕಾಶ ವಾಗದಂತೆ ಕಾರ್ಯ ನಿರ್ವಹಿಸಬೇಕು” ಎಂದು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿದ್ದೀರಾ? ಮಂಗಳೂರು | ಅಶ್ರಫ್, ರಹ್ಮಾನ್‌ರಿಗೆ ನ್ಯಾಯ ಕೋರಿ ಎಸ್.ಐ.ಓ, ಸೋಲಿಡಾರಿಟಿ ಪ್ರತಿಭಟನೆ
ತಮ್ಮ ಮನವಿಗೆ ಸ್ಪಂದಿಸಿರುವುದಕ್ಕೆ ಬೋಳಂಗಡಿಯ ನಿವಾಸಿಗಳಾದ ನಜೀಬ್ ಪಿ ಡಿ, ಬಿ ಎ ಸಲೀಂ ಬೋಳಂಗಡಿ, ರಫೀಕ್ ಪುತ್ತೂರು ಅವರು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಬಿ ಎಂ ಜೈಶಾಂತ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
