ಬಂಟ್ವಾಳ ತಾಲೂಕಿನ ಸುಜೀರು ಶಾಲೆಯಲ್ಲಿ ಕಳೆದ 16 ವರ್ಷಗಳಿಂದ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸಿದ ಶಶಿಮಂಗಳ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಶಾಲೆಯಲ್ಲಿ ಅದ್ಧೂರಿಯಾಗಿ ನಡೆಸಲಾಯಿತು.
ಈ ಸಂದರ್ಭ ಎಸ್ಡಿಎಂಸಿ ಅಧ್ಯಕ್ಷ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಮಾತನಾಡಿ, “ಸುಜೀರು ಶಾಲೆಗೆ ಶಶಿಮಂಗಳ ರೀತಿಯ ಮುಖ್ಯೋಪಾಧ್ಯಾಯಿನಿ ಸಿಗಲು ಸಾಧ್ಯವಿಲ್ಲ. ಶಶಿಮಂಗಳ ಅವರು ವಿದ್ಯಾರ್ಥಿಗಳು ಹಾಗೂ ಪಾಲಕರ ಮನಗೆದ್ದಿದ್ದಾರೆ. ಅವರು ಇಂದಿನ ಶಿಕ್ಷಕರಿಗೆ ಮಾದರಿ” ಎಂದರು.
ಎಸ್ಡಿಎಂಸಿಯ ಮಾಜಿ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಮಾತನಾಡಿ, “ಶಶಿಮಂಗಳ ಅವರು ಸಹನೆ ಸಾಧನೆ ಉಳ್ಳವರು. ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡಿದ್ದಾರೆ. ರಾಷ್ಟ್ರಮಟ್ಟದ ಕ್ರೀಡೆಗೆ ಪ್ರೋತ್ಸಾಹ ಮಾಡಿದ್ದಾರೆ” ಎಂದು ಶ್ಲಾಘಿಸಿದರು.
ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, “ಶಶಿಮಂಗಳ ಅವರು ಇಡೀ ಜಿಲ್ಲೆಯಲ್ಲಿ ಉತ್ತಮ ಶಿಕ್ಷಕಿ” ಎಂದರು.
ನಿವೃತ್ತ ಶಿಕ್ಷಕ ಮೊಹಮ್ಮದ್ ತುಂಬೆ ಮಾತನಾಡಿ, “ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರವಿದೆ. ಶಶಿಮಂಗಳ ಅವರು ಮೃದು ಸ್ವಭಾವದವರು. ಅಭಿವೃದ್ಧಿ ದೃಷ್ಟಿಯಲ್ಲಿ ಕೆಲಸ ಕಾರ್ಯ ಮಾಡಿದ್ದಾರೆ” ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಶಿಮಂಗಳ, “ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ನಾನು ಶಿಕ್ಷಕಿಯಾಗುವ ಗುರಿಯನ್ನು ಇಟ್ಟುಕೊಂಡಿಲ್ಲ. ಶಿಕ್ಷಕ ವೃತ್ತಿಯು ಜೀವಂತ ಇರುವ ವ್ಯಕ್ತಿಗಳ ಜೊತೆ ಮಾಡುವ ವೃತ್ತಿ” ಎಂದರು.
“ಶಿಕ್ಷಕರಲ್ಲಿನ ಸಂಸ್ಕಾರ, ಸಂಸ್ಕೃತಿ, ಸಮಯಪಾಲನೆ, ಸೌಮ್ಯತೆ, ಪ್ರಾಮಾಣಿಕತೆಯಂತಹ ಗುಣಗಳನ್ನು ಯುವಪೀಳಿಗೆಗೆ ಧಾರೆ ಎರೆಯಬೇಕು. ಭವಿಷ್ಯ ಭಾರತದಲ್ಲಿನ ಉತ್ತಮ ಸಮಾಜದ ಅಭಿವೃದ್ಧಿಗೆ ಶಿಕ್ಷಕರು ಪ್ರಯತ್ನಿಸಬೇಕು” ಎಂದು ಸಲಹೆ ನೀಡಿದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ, ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಟಿಕೆ ಬಶೀರ್, ಅಬ್ದುಲ್ ಮಜೀದ್, ಭಾಸ್ಕರ್ ರೈ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.
