12ನೇ ಶತಮಾನದಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಬಸವಣ್ಣನವರ ನೇತ್ರತ್ವದಲ್ಲಿ ನಡೆದ ಸಮಾಜೋಧಾರ್ಮಿಕ ಕ್ರಾಂತಿ ಕರ್ನಾಟಕ ಅಷ್ಟೇ ಅಲ್ಲ, ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಒದಗಿಸಿತು ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,”ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆ ಪ್ರಸ್ತಾವನೆ ಹಲವು ವರ್ಷಗಳಿಂದ ಇತ್ತು. ಆದರೆ ಈ ಹಿಂದೆ ಅನೇಕ ಜನ ಮುಖ್ಯಮಂತ್ರಿಗಳಾಗಿದ್ದಾರೆ, ಅದರಲ್ಲೂ ಲಿಂಗಾಯತ ಸಮುದಾಯದವರಿದ್ದರೂ ಆಗಲಿಲ್ಲ. ಅದನ್ನು ಇಂದು ಸಿಎಂ ಸಿದ್ದರಾಮಯ್ಯನವರು ಮಾಡಿದ್ದಾರೆ” ಎಂದು ತಿಳಿಸಿದರು.
“ಬುದ್ದ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧೀಜಿಯವರ ತತ್ವಾದರ್ಶಗಳ ಮೇಲೆ ನಡೆಯುವ ನಮ್ಮ ಸರ್ಕಾರ, ಅವರ ಪ್ರೇರಣೆಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ ಸಿಎಂ ಸಿದ್ದರಾಮಯ್ಯನವರು ವಿವಿಧ ಸಂಘ, ಸಂಸ್ಥೆಗಳು, ಮಠಾಧೀಶರು, ಬಸವತತ್ವ ಅನುಯಾಯಿಗಳ ಮನವಿ ಮೇರೆಗೆ ಸರ್ಕಾರವು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಐತಿಹಾಸಿಕ ತೀರ್ಮಾನ ಘೋಷಿಸಿದ್ದಾರೆ” ಎಂದರು.
“ಕಾರ್ಲ್ ಮಾರ್ಕ್ಸ್ ನವರ ದಾಸ್ ಕ್ಯಾಪಿಟಲ್ ತತ್ವಕ್ಕಿಂತ ಮುಂಚಿತವಾಗಿ ಸಮಾಜವಾದ ಪ್ರತಿಪಾದನೆ ಮಾಡಿದವರು ವಿಶ್ವಗುರು ಬಸವಣ್ಣ ಹಾಗೂ ಸಮಕಾಲೀನ ಶರಣರು. ಜಗತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಮೊಟ್ಟ ಮೊದಲ ಕ್ರಾಂತಿ ನಡೆದಿದ್ದು ಬಸವಕಲ್ಯಾಣದಲ್ಲಿ. ಹೀಗಾಗಿ ಎಲ್ಲ ಬಸವಣ್ಣನವರ ಸಮಕಾಲೀನ ವಚನಕಾರರು ಪ್ರತಿಪಾದಿಸಿದ ತತ್ವ ಚಿಂತನೆಗಳು ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ” ಎಂದು ಹೇಳಿದರು.
“ಬಸವಣ್ಣನವರು ಪ್ರತಿಪಾದಿಸಿದ ಸಾರ್ವತ್ರಿಕ ಮೌಲ್ಯಗಳಾದ ಜಾತಿರಹಿತ ಸಮಾಜ ನಿರ್ಮಾಣ, ಕಾಯಕದ ಮಹತ್ವ ಮತ್ತು ವರ್ಗರಹಿತ ಸಮಾಜ ಜೀವನ ಮಾರ್ಗ ಸರ್ವಕಾಲಕ್ಕೂ ದಾರಿದೀಪವಾಗಿದೆ. ಕಲ್ಯಾಣ ಕ್ರಾಂತಿ ಮೂಲಕ ಸರ್ವರ ಸಮಾನತೆ ಅಸ್ಪೃಶ್ಯತೆ ಹೋಗಲಾಡಿಸಲು ಬಸವಣ್ಣನವರು ವೈಚಾರಿಕ, ವೈಜ್ಞಾನಿಕ ತಳಹದಿ ಮೇಲೆ ಸುಂದರ ಸಮಾಜ ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿದವರು” ಎಂದು ಹೇಳಿದರು.
“ಇಂದು ಸಮಾಜದಲ್ಲಿ ಕಲುಷಿತ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.ಜಾತಿ-ಧರ್ಮಗಳ ಮಧ್ಯೆ ಒಡೆದಾಳುವ ನೀತಿ ಅನುಸರಿಸಿ ಭಾವನಾತ್ಮಕ ವಿಷಯಗಳನ್ನು ಕೆರಳಿಸಿ, ಜನರಿಗೆ ಮತ್ತೆ ಮೌಢ್ಯ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಿದೆ. ಒಂದು ಸಮುದಾಯದವರನ್ನು ಗುರಿಯಾಗಿಸಿ, ಅಧಿಕಾರದ ದುರುಪಯೋಗಪಡಿಸಿಕೊಂಡು ಬೇಕಾದ ಕಾಯ್ದೆಗಳನ್ನು ರೂಪಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲಸಂಗಮ ಬಸವಧರ್ಮ ಪೀಠದ ಡಾ. ಮಾತೆ ಗಂಗಾದೇವಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ, “ಹಲವು ವರ್ಷಗಳ ಕನಸು ಸಿಎಂ ಸಿದ್ದರಾಮಯ್ಯನವರು ನನಸು ಮಾಡಿದ್ದಾರೆ. ಇದರಿಂದ ಇಡೀ ಸಮಾಜಕ್ಕೆ ತುಂಬಾ ಸಂತೋಷ ಉಂಟು ಮಾಡಿದೆ. ನಾವೆಲ್ಲರೂ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ” ಎಂದು ಹೇಳಿದರು.
ಪೌರಾಡಳಿತ ಹಾಗು ಹಜ್ ಸಚಿವ ರಹೀಂ ಖಾನ್ ಮಾತನಾಡಿ, “ಬಸವಣ್ಣನವರು ಒಂದೇ ಜಾತಿಗೆ ಸೀಮಿತವಲ್ಲ, ಅವರ ವಚನ ಸಾಹಿತ್ಯದ ಮೂಲಕ ಸಮ ಸಮಾಜ ನಿರ್ಮಿಸಲು ಪ್ರಾಮಾಣಿಕವಾಗಿ ದುಡಿದ ಬಸವಣ್ಣನವರ ತತ್ವ ಸಿದ್ದಾಂತ ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸಮಾಜದಲ್ಲಿ ಯಾವುದೇ ಕೋಮು ಗಲಭೆ ನಡೆಯುವುದಿಲ್ಲ” ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಬಸವಣ್ಣನವರ ಭಾವಚಿತ್ರದ ಮೆರವಣಿಗೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಅಂಬೇಡ್ಕರ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ಜಿಲ್ಲಾ ರಂಗಮಂದಿರಕ್ಕೆ ತಲುಪಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿಗಳ ಅಸ್ತಿಭಾರದ ಮೇಲೆ ಕಟ್ಟಿದ ಅಹಿಂದ ಬಜೆಟ್
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೀರಿಶ ದೀಲಿಪ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಬಸವಕಲ್ಯಾಣ ಹರಳಯ್ಯ ಪೀಠದ ಡಾ.ಗಂಗಾಬಿಕೆ ಪಾಟೀಲ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ಜಿಲ್ಲಾ ಬಸವ ದಳದ ಅಧ್ಯಕ್ಷರು, ಸಮಾಜದ ಮುಖಂಡರು, ಹಿರಿಯರು, ಬಸವ ಅನುಯಾಯಿಗಳು ಉಪಸ್ಥಿತರಿದ್ದರು.