ವಿಪಕ್ಷ ನಾಯಕ ಆಯ್ಕೆ, ಎನ್‌ಡಿಎ ಮೈತ್ರಿಕೂಟ ಸೇರುವುದು ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಾವು ತೆರಳುವ ಕಡೆ ಮಾಧ್ಯಮ ಪ್ರತಿನಿಧಿಗಳಿಗೆ ಭಿನ್ನ ಭಿನ್ನವಾಗಿ ಹೇಳಿಕೆ ನೀಡುತ್ತಿದ್ದಾರೆ.
ಕುಮಾರಸ್ವಾಮಿ ಆಡುವ ಪ್ರತಿ ಮಾತುಗಳ ಹಿಂದೆ ರಾಜಕೀಯ ತಂತ್ರಗಾರಿಕೆ ಎದ್ದು ಕಾಣುತ್ತಿದೆ. ತಾವು ಆಡುವ ಮಾತುಗಳಿಗೆ ಆಡಳಿತ ಪಕ್ಷದಿಂದ, ಬಿಜೆಪಿಯಿಂದ ಹಾಗೂ ಮಾಧ್ಯಮಗಳಿಂದ ಹೇಗೆಲ್ಲ ಪ್ರತಿಕ್ರಿಯೆ ಬರಬಹುದು ಎಂಬುದನ್ನು ಲೆಕ್ಕಾಚಾರವಿಟ್ಟುಕೊಂಡು ದಿನಕ್ಕೊಮ್ಮೆ ಅಚ್ಚರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು, ರಾಜ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಎನ್ನುವ ಮಾತುಗಳು ಹೆಚ್ಚು ಕೇಳಿಬರುತ್ತಿವೆ. ಇದೇ ಕಾರಣದಿಂದ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬವಾಗಿದೆ ಎನ್ನಲಾಗಿದೆ. ಈ ನಡುವೆ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳು ವಿಪಕ್ಷ ನಾಯಕ ಸ್ಥಾನ ಮತ್ತು ತಮ್ಮ ಪಕ್ಷದ ಮುಂದಿನ ನಡೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಮಂಗಳವಾರ ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, “ನಾವು ಗೆದ್ದಿರುವುದು ಕೇವಲ 19 ಸ್ಥಾನ. ನಾನು ವಿರೋಧ ಪಕ್ಷದ ನಾಯಕ ಆಗಲು ಹೇಗೆ ಸಾಧ್ಯ? ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ನನಗೂ ಏನು ಸಂಬಂಧ? ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದರೆ, ಅತ್ತ ದಿಲ್ಲಿಯಲ್ಲಿ ಇಂದು (ಜು.18) ಎನ್‌ಡಿಎ ಸಭೆ ಕೂಡ ಇದೆ. ಈ ಸಭೆಗೆ ಎಚ್ ಡಿ ಕುಮಾರಸ್ವಾಮಿ ತೆರಳಲಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ವಿಚಾರವಾಗಿ ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ”ಎನ್‌ಡಿಎ, ಯುಪಿಎ ಸಭೆಗಳಿಗೆ ಆಹ್ವಾನ ಬಂದಿಲ್ಲ. ಎನ್‌ಡಿಎ ಕಡೆಯಿಂದ ಆಮಂತ್ರಣ ಬಂದರೆ ಖಂಡಿತ ಹೋಗುತ್ತೇನೆ. ಹಲವಾರು ವಿಚಾರ ಚರ್ಚೆ ಮಾಡುತ್ತೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ, ಜೆಡಿಎಸ್ ಮತ್ತು ಪ್ರಾದೇಶಿಕ ಅಸ್ಮಿತೆ
ಮುಂದುವರಿದು, “ಇನ್ನೊಂದೆಡೆ ಕೇಂದ್ರದಲ್ಲಿ ಸಚಿವ ಸ್ಥಾನ ಸೇರಿದಂತೆ ಯಾವುದೇ ಹುದ್ದೆ ಕೇಳಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಬಿಜೆಪಿಯಲ್ಲೇ ಸಮರ್ಥರಿದ್ದಾರೆ. ಅಂಥವರನ್ನೇ ಪ್ರತಿಪಕ್ಷದ ನಾಯಕನಾಗಿ ಆಯ್ಕೆ ಮಾಡುವಂತೆ ಬಿಜೆಪಿ ವರಿಷ್ಠರಿಗೆ ಹೇಳುತ್ತೇನೆ. ನಾನು ಜನರು ಕೊಟ್ಟಿರುವ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧ. ಅದನ್ನು ನಿಭಾಯಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಹೀಗೆ ದಿನಕ್ಕೊಮ್ಮೆ ನಾನಾ ತರ ಹೇಳಿಕೆಗಳನ್ನು ನೀಡುತ್ತ ತಮ್ಮ ಮತ್ತು ಜೆಡಿಎಸ್ ಪಕ್ಷದ ಸ್ಪಷ್ಟ ನಿಲುವು ಏನು ಎಂಬುದನ್ನು ರಾಜ್ಯದ ಜನತೆ ಮುಂದಿಡಲು ಕುಮಾರಸ್ವಾಮಿ ಅವರಿಗೆ ಈವರೆಗೂ ಆಗಿಲ್ಲ. ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ, ಎನ್ ಡಿಎ ಮೈತ್ರಿಕೂಟ ಸೇರುತ್ತದೆ ಎಂಬಿತ್ಯಾದಿ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಆದರೆ, ಅವರ ಮಾತುಗಳ ಹಿಂದಿನ ತಂತ್ರ ಮೈತ್ರಿ ಬಗ್ಗೆ ಪುಷ್ಟಿ ನೀಡುವಂತಿವೆ. ವಿಪಕ್ಷ ನಾಯಕ ಸ್ಥಾನದ ಬಗ್ಗೆ ಕುಮಾರಸ್ವಾಮಿ ಅವರು ಮನಸಲ್ಲೇ ಮಂಡಿಗೆ ತಿನ್ನುತ್ತಿದ್ದಾರಾ ಎನ್ನುವ ಪ್ರಶ್ನೆ ಕೂಡ ಮೂಡುತ್ತಿದೆ.