ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಹತ್ತಿಸಿ ಒಡಹುಟ್ಟಿದ ತಮ್ಮನನ್ನೇ ಅಣ್ಣನೋರ್ವ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ ಜಮೀನಿನಲ್ಲಿ ನಡೆದಿದೆ.
ಯರಗಟ್ಟಿ ಪಟ್ಟಣದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಿರುಕುಳಕ್ಕೆ ಬೇಸತ್ತು ಸಹೋದರನ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಯರಗಟ್ಟಿಯ ಗೋಪಾಲ ಬಾವಿಹಾಳ (27) ಹತ್ಯೆಯಾದ ವ್ಯಕ್ತಿಯಾಗಿದ್ದು, ಮಾರುತಿ ಬಾವಿಹಾಳ (30) ತಮ್ಮನನ್ನೇ ಹತ್ಯೆಗೈದ ಆರೋಪಿ ಸಹೋದರ.
ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ ಎಂದು ಗೋಪಾಲ ಕಿರಿಕಿರಿ ಮಾಡುತ್ತಿದ್ದ ಹಾಗೂ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಅನ್ನು ಗೋಪಾಲ ಪತ್ನಿಯ ಮನೆಯಲ್ಲಿ ಇರಿಸಿದ್ದ. ಹೀಗಾಗಿ, ತಮ್ಮನ ಕಿರಿಕಿರಿಗೆ ಬೇಸತ್ತು ಬೈಕಿನಲ್ಲಿ ಹೊರಟಿದ್ದ ಗೋಪಾಲನ ಮೇಲೆ ಟ್ರ್ಯಾಕ್ಟರ್ ಹರಿಸಿ ಮಾರುತಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಾಲನ ತಂದೆ ಅರ್ಜುನ್ ಬಾವಿಹಾಳ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಕಳೆದ 15 ದಿನಗಳ ಹಿಂದಷ್ಟೇ ತಮಗೆ ಬಂದ ಜಮೀನು ಪಾಲು, ಹಣ ಪಡೆದು ಸಹೋದರರು ಬೇರೆ ಬೇರೆಯಾಗಿದ್ದರು. ಮೂವರೂ ಸಹೋದರರಿಗೂ ಒಂದೊಂದು ಟ್ರ್ಯಾಕ್ಟರ್ ಪಾಲಿಗೆ ಬಂದಿದ್ದವು. ಮೃತ ಗೋಪಾಲನಿಗೆ ಬಂದಿದ್ದ ಟ್ರ್ಯಾಕ್ಟರ್ ಅನ್ನು ಹೆಂಡತಿ ಮನೆಯಲ್ಲಿ ಇಟ್ಟಿದ್ದಕ್ಕೆ ಗಲಾಟೆ ಆಗಿತ್ತು. ನಾನು ದುಡಿದಿರುವುದನ್ನು ಹಾಳು ಮಾಡುತ್ತಿರುವೆ ಎಂದು ಆಗಾಗ್ಗೆ ಇಬ್ಬರು ಸಹೋದರ ನಡುವೆ ಜಗಳ ನಡೆಯುತ್ತಲೇ ಇತ್ತು. ಗೋಪಾಲ ವಿಪರೀತ ಕುಡಿತದ ಚಟ ಹೊಂದಿದ್ದು, ಟ್ರ್ಯಾಕ್ಟರ್ ವಿಚಾರಕ್ಕೆ ಇಬ್ಬರು ಸಹೋದರರ ಮಧ್ಯೆ ಮತ್ತೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಡಿ.24ಕ್ಕೆ ಬಂದ್‌ಗೆ ಕರೆ
ತಮ್ಮನನ್ನು ಕೊಲೆ ಮಾಡಲೆಂದೇ ಹೊಂಚುಹಾಕಿ ಕುಳಿತಿದ್ದ ಮಾರುತಿ, ಯರಗಟ್ಟಿ ಹೊರವಲಯದ ಬೂದಿಗೊಪ್ಪ ರಸ್ತೆಯಲ್ಲಿ ಬೈಕ್ ಮೇಲೆ ಬರುತ್ತಿದ್ದ ಗೋಪಾಲನಿಗೆ ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆದಿದ್ದಾನೆ. ಅವಘಡದಲ್ಲಿ ಜಮೀನಿನಲ್ಲಿ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟ್ರ್ಯಾಕ್ಟರ್ನಡಿ ಸಿಲುಕಿದ್ದ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
