ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಕುರಿಗಳು ಮೃತಪಟ್ಟಿದ್ದು, ಮನೆ ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿ ತಾಲೂಕಿನ ಬಸವನಕುಡಚಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಅಭಿಷೇಕ್ ಕೌಲಗಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಸ್ಫೋಟದ ವೇಳೆ ಮನೆ ಮಂದಿ ಯಾರೂ ಮನೆಯಲ್ಲಿ ಇಲ್ಲದ ಪರಿಣಾಮ ಮಾನವ ಜೀವಹಾನಿ ಸಂಭವಿಸಿಲ್ಲ.
ಘಟನೆಯಲ್ಲಿ ನಾಲ್ಕು ಕುರಿಗಳು ಸಜೀವ ದಹನಗೊಂಡಿದ್ದು, ಮನೆ ಸಂಪೂರ್ಣ ಸುಟ್ಟುಹೋಗಿದೆ. ಅಲ್ಲದೆ, ಟ್ರ್ಯಾಕ್ಟರ್ ಖರೀದಿಗಾಗಿ ತಂದಿಟ್ಟಿದ್ದ ಹಣವೂ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಬೆಂಕಿ; ಕೋಟ್ಯಂತರ ರೂ. ನಷ್ಟ
ಬಲಿಪಾಡ್ಯಮಿಯಂದು (ಮಂಗಳವಾರ) ಟ್ರ್ಯಾಕ್ಟರ್ ಖರೀದಿಸಲು ಅಭಿಷೇಕ್ ಅವರು ನಿರ್ಧರಿಸಿದ್ದರು. ಅದರಂತೆ ಬ್ಯಾಂಕ್ನಿಂದ ಹಣ ತೆಗೆದುಕೊಂಡು ಬಂದು ಮನೆಯಲ್ಲಿಟ್ಟಿದ್ದರು. ಈ ನಡುವೆ ಸಿಲಿಂಡರ್ ಸ್ಫೋಟಗೊಂಡು ಹಣ ಸುಟ್ಟು ಭಸ್ಮವಾಗಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಭಿಷೇಕ್ ಕುಟುಂಬ ಕಂಗಾಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.