ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
“ಪ್ರವಾಸೋದ್ಯಮ ಮಂಡಳಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರಕ್ಕೆ ಸುಮಾರು ಎರಡು ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ತಂಗುದಾಣದ ವ್ಯವಸ್ಥೆಯನ್ನು ಪೂರೈಸಬೇಕಾಗಿದೆ. ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ” ಎಂದರು.
“ಕ್ಷೇತ್ರದಲ್ಲಿ 1087 ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು. ಮನುಷ್ಯರಿಗೆ ದಾಸೋಹ ವ್ಯವಸ್ಥೆಯಿರುವಂತೆ ರಾಸುಗಳಿಗೂ ಮೇವು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ” ಎಂದರು.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ರಾಯಚೂರು ವಿವಿ ಕುಲಪತಿ ಮುಖ್ಯ ಅತಿಥಿ!
ಬೆಳಗಾವಿ ಅಧಿವೇಶನದ ವೇಳೆಗೆ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, “ವಿಜಯೇಂದ್ರರವರ ತಂದೆ ಯಡಿಯೂರಪ್ಪನವರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಮ್ಮ ಮೇಲೆ ಇಂತಹ ಹೇಳಿಕೆಗಳನ್ನು ನೀಡಲು ಯಾವ ನೈತಿಕತೆ ಇದೆ? ಕಾಂಗ್ರೆಸ್ ಸರ್ಕಾರಕ್ಕೆ ಜನ ನೀಡುತ್ತಿರುವ ಬೆಂಬಲವನ್ನು ಸಹಿಸಲಾಗದೇ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದರು.
