ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಕ್ಟೋಬರ್ 18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದೇವೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುಖ್ಯಮಂತ್ರಿ ಭೇಟಿಗಾಗಿ ದಿನಾಂಕ ನಿಗದಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೀಸಲಾತಿ ಹೋರಾಟ ಬಳಸಿಕೊಂಡು ಆಯ್ಕೆಯಾದ ನಮ್ಮ ಸಮುದಾಯದ ಕಾಂಗ್ರೆಸ್‌ನ ಶಾಸಕರು, ಈಗ ನಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಮುಂದೆ ಏಕೆ ಧ್ವನಿ ಎತ್ತುತ್ತಿಲ್ಲವೆಂದು ಗೊತ್ತಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮ ಬೇಡಿಕೆ ಈಡೇರಿಕೆಗಾಗಿ ಕಳೆದ ತಿಂಗಳು ವಕೀಲರ ಸಮಾವೇಶ ನಡೆಸಿ, ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿದ್ದೆವು. ಆಗ ಸಿದ್ದರಾಮಯ್ಯ ಮಾತನಾಡಿ, ಅ.15ರಂದು ಸಮುದಾಯದೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ್ದರು. ಆದರೆ, ಮುಖ್ಯಮಂತ್ರಿ ಈಗ ನವದೆಹಲಿಗೆ ಹೋಗುತ್ತಿದ್ದಾರೆ. ಸಭೆಯ ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದು ಕಳೆದ ವಾರವಷ್ಟೇ ನಮಗೆ ಮಾಹಿತಿ ಸಿಕ್ಕಿದೆ” ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನ.1ಂದು ಕರಾಳ ದಿನಾಚರಣೆಗೆ ಎಂಇಎಸ್ ನಿರ್ಣಯ; ಕನ್ನಡಪರ ಹೋರಾಟಗಾರರು ತೀವ್ರ ಹೋರಾಟದ ಎಚ್ಚರಿಕೆ
“ಅಕ್ಟೋಬರ್ 18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಿದ ನಂತರವೂ, ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಯಾಗದಿದ್ದರೆ ವಿಧಾನಸೌಧಕ್ಕೆ ಹೋಗಿ ಅಸಮಾಧಾನ ಹೊರಹಾಕುತ್ತೇವೆ” ಎಂದು ಎಚ್ಚರಿಸಿದರು.