ಬೆಳಗಾವಿ ಡಿಸಿಸಿ ಬ್ಯಾಂಕ್ ಮೇಲೆ 1986ರಿಂದ ಸುದೀರ್ಘ ಅವಧಿಯವರೆಗೆ ಬಿಗಿ ಹಿಡಿತ ಹೊಂದಿದ್ದ ಕತ್ತಿ ಕುಟುಂಬ, ರಮೇಶ್ ಕತ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕತ್ತಿ ಕುಟುಂಬವು ತಮ್ಮ ಹಿಡಿತವನ್ನು ಕಳೆದುಕೊಂಡಿದೆ.
ರಮೇಶ್ ಕತ್ತಿ 1988 ರಿಂದ ಡಿಸಿಸಿ ಬ್ಯಾಂಕಿನಲ್ಲಿ 10 ವರ್ಷಗಳ ಕಾಲ ನಿರ್ದೇಶಕರಾಗಿ, ಐದು ವರ್ಷ ಉಪಾಧ್ಯಕ್ಷರಾಗಿ 27 ವರ್ಷಗಳ ಕಾಲ ಅಂದರೆ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಕ್ಟೋಬರ್ 3ರಂದು ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ರಾಜೀನಾಮೆ ನೀಡುವಂತಾಯಿತು.
ರಾಜ್ಯ ರಾಜಕಾರಣದಲ್ಲಿ ತನ್ನದೇ ಚಾಪು ಮೂಡಿಸಿರುವ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸದ್ಯ ಬೆಳಗಾವಿ ರಾಜಕಾರಣ ಮೇಲೂ ಬಿಗಿ ಹಿಡಿತ ಹೊಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನವೆಂಬರ್ 13ರಂದು ನಡೆದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಅತೀ ಹೆಚ್ಚು ನಿರ್ದೇಶಕರ ಬಲ ಇದ್ದರೂ ಕೂಡ, ತಮ್ಮ ಬೆಂಬಲಿಗನನ್ನು ಅಧ್ಯಕ್ಷನನ್ನಾಗಿ ನೇಮಿಸುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಬೆಳಗಾವಿ ರಾಜಕಾರಣದಲ್ಲಿ ತಾವೇ ‘ಕಿಂಗ್ ಮೇಕರ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ರಮೇಶ್ ಕತ್ತಿ ರಾಜೀನಾಮೆಗೆ ಕಾರಣವಾಯಿತೇ ಲೋಕಸಭಾ ಚುನಾವಣೆ?
ರಾಜೀನಾಮೆ ನಂತರ ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವರು ಹೊಸ ಸದಸ್ಯತ್ವ ಶಿಫಾರಸು ನೀಡಿದರೆ ಇನ್ನೂ ಕೆಲವರು ಬೇಡ ಅಂತಿದ್ದರು. ಇದರಿಂದ ನೋವುಂಡ ಅವರು, ರಾಜೀನಾಮೆ ನೀಡಿದ್ದೆನೆ ಎಂದು ಹೇಳಿದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆಯವರ ಗೆಲುವಿಗೆ ಸಹಕರಿಸಲಿಲ್ಲ. ಆ ಕಾರಣಕ್ಕೆ ಅಣ್ಣಾ ಸಾಹೇಬ್ ಜೊಲ್ಲೆ ಬಣದ ಸದಸ್ಯರು ತಕರಾರು ಮಾಡಿದರು. ಈ ಕಾರಣಕ್ಕೆ ರಮೇಸ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು ಎಂದು ಜಿಲ್ಲೆಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಯಾಕಿಷ್ಟು ಮಹತ್ವ?
ಬೆಳಗಾವಿ ಡಿಸಿಸಿ ಬ್ಯಾಂಕ್ ಒಟ್ಟು5.791ಕೋಟಿ ಠೇವಣಿ, 5200 ಕೋಟಿ ರೂ ಸಾಲ ನೀಡಿದ್ಧು,1155 ಪಿಕೆಪಿಎಸ್‌ಗಳನ್ನು ಹೊಂದಿದ್ದು 40ಲಕ್ಷಕ್ಕೂ ಹೆಚ್ಚು ರೈತರ ಆರ್ಥಿಕತೆಯ ಮೇಲೆ ಬ್ಯಾಂಕ್ ಪರಿಣಾಮ ಬಿರುತ್ತದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆ ಜಿಲ್ಲೆಯಲ್ಲಿ ಮಂತ್ರಿ ಸ್ಥಾನಕ್ಕೆ ಸರಿಸಮವಾಗಿದೆ ಎಂಬುದು ಜಿಲ್ಲೆಯಲ್ಲಿ ಜನಜನಿತವಾದ ಸಂಗತಿ. ಮಂತ್ರಿ ಸ್ಥಾನಕ್ಕೆ ಸಮನಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಅತಿದೊಡ್ಡ ಸಹಕಾರ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ನರೇಗಾ ಕೆಲಸಕ್ಕೆ ಹಣದ ಬೇಡಿಕೆ: ತಾಂತ್ರಿಕ ಸಹಾಯಕ ಕೆಲಸದಿಂದ ವಜಾ
ಉಮೇಶ್ ಕತ್ತಿ ನಿಧನದ ನಂತರ ಏಕಾಂಗಿಯಾದ ರಮೇಶ್ ಕತ್ತಿ!
ಉಮೇಶ್ ಕತ್ತಿ ಹುಕ್ಕೇರಿ ಕ್ಷೇತ್ರದಿಂದ ಬೇರೆ ಬೇರೆ ಪಕ್ಷಗಳಿಂದ 8 ಸಲ ಶಾಸಕರಾಗಿ, ವಿವಿಧ ಇಲಾಖೆಗಳ ಸಚಿವರಾಗಿ
ಕಾರ್ಯನಿರ್ವಹಿಸಿದ್ದರು. 2009ರಿಂದ 2014ರ ಅವದಿಯಲ್ಲಿ ರಮೇಶ್ ಕತ್ತಿ ಚಿಕ್ಕೋಡಿ ಲೋಕಸಭಾ ಸಂಸದರಾಗಿದ್ದರು. ಆದರೆ ಸಹೋದರ ಉಮೇಶ್ ಕತ್ತಿ ನಿಧನರಾದ ನಂತರ ರಮೇಶ ಕತ್ತಿಯವರಿಗೆ ಚಿಕ್ಕೋಡಿ ಲೋಕಸಭಾ ಟಿಕೆಟ್ ಸಿಗದೆ ಹೋಯಿತು. ಈಗ ತಮ್ಮ ಕೈಯ್ಯಲ್ಲಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವು ಕೂಡ ಕೈ ತಪ್ಪಿದೆ.

ಬಿಜೆಪಿ ತೊರೆಯುವ ಸುಳಿವು ಕೊಟ್ಟಿದ್ದ ರಮೇಶ್ ಕತ್ತಿ
ಕಳೆದ ಅಕ್ಟೋಬರ್ 5ರಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಮೇಶ ಕತ್ತಿಯವರು, “ಆಡು ಮುಟ್ಟದ ಸೊಪ್ಪಿಲ್ಲ ಕತ್ತಿ ಸಹೋದರರು ನೋಡದ ಪಕ್ಷವಿಲ್ಲ. ನಾವು ಎಲ್ಲ ಪಕ್ಷಗಳ ಜೊತೆ ಒಡನಾಟ ಹೊಂದಿದ್ದೇವೆ. ಸಿದ್ದರಾಮಯ್ಯರದ್ದು ಜನತಾ ಪರಿವಾರ, ನಮ್ಮದು ಕೂಡ ಜನತಾ ಪರಿವಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಬಹುದು. ವೈಯಕ್ತಿಕವಾಗಿ ಅವರು ದಕ್ಷ, ಆರ್ಥಿಕ ನಿರ್ವಹಣೆ ಮಾಡುವ ನಾಯಕ ಎಂದು ಹಾಡಿ ಹೊಗಳಿದ್ದರಲ್ಲದೆ ಹಿರಿಯರ ಜೊತೆ ಚರ್ಚಿಸಿ ಮುಂದಿನ ರಾಜಕೀಯ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದರು. ಆ ಮೂಲಕ ಬಿಜೆಪಿ ತೊರೆಯುವ ಧಾಟಿಯಲ್ಲಿ ಮಾತನಾಡಿದ್ದರು.
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದು, ಸುದೀರ್ಘ ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೂಡ ಈಗ ರಮೇಶ್ ಕತ್ತಿ ಕಳೆದುಕೊಂಡಿದ್ದಾರೆ. ಈಗ ರಾಜಕಾರಣದಲ್ಲಿ ರಮೇಶ ಕತ್ತಿಯವರ ಮುಂದಿನ ನಡೆ ಏನು ಎಂಬುದು ಜಿಲ್ಲೆಯ ಜನತೆಯ ಕುತೂಹಲಕ್ಕೆ ಕಾರಣವಾಗಿದೆ.

ಅಪ್ಪಾ ಸಾಹೇಬ್ ಕುಲಗೋಡೆ ಅಧ್ಯಕ್ಷರಾಗಿ ಆಯ್ಕೆ
ಅತೀ ಹೆಚ್ಚು ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದರೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕನಿಗೆ ಮಣೆ ಹಾಕಲಾಗಿದೆ. ಸತೀಶ್ ಜಾರಕಿಹೊಳಿ ಆಪ್ತ ಅಪ್ಪಾ ಸಾಹೇಬ್ ಕುಲಗೋಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂವರು ಜಾರಕಿಹೊಳಿ ಸಹೋದರರು ಮೂರು ಆಪ್ತರ ಹೆಸರನ್ನು ಸೂಚಿಸಿದ್ದರು. ಅಣ್ಣಾಸಾಹೇಬ್ ಜೊಲ್ಲೆ ಪರ ರಮೇಶ್ ಜಾರಕಿಹೊಳಿ, ಸುಭಾಷ್ ಡವಳೇಶ್ವರ ಪರ ಬಾಲಚಂದ್ರ ಜಾರಕಿಹೊಳಿ ಹಾಗೂ ಅಪ್ಪಾಸಾಹೇಬ್ ಕುಲಗೋಡೆ ಪರ ಸತೀಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದರು. ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ ಅವರ ಆಪ್ತ ಅಪ್ಪಾ ಸಾಹೇಬ್ ಕುಲಗೋಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಧಿ ಪೂರ್ಣಗೊಳ್ಳಲು ಒಂದೇ ವರ್ಷ ಬಾಕಿ ಇದೆ. ಹೀಗಿದ್ದರೂ ಆ ಸ್ಥಾನ ಪಡೆದುಕೊಳ್ಳಲು ಇದನ್ನು ಜಾರಕಿಹೊಳಿ ಕುಟುಂಬ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು