ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಆತ್ಮಾವಲೋಕನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಕಾರ್ಯಕರ್ತರಿಗೆ ಧೈರ್ಯ ತುಂಬಲು ಯತ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ ಲಕ್ಷ್ಮೀ ಹೆಬ್ಬಾಳ್ಕರ್, “ಸೋಲಿನಿಂದ ಯಾರು ಧೃತಿಗೆಡಬೇಕಿಲ್ಲ. ಹೋರಾಟ ಮತ್ತು ಸಂಘಟನೆಯ ಮೂಲಕ ನಮ್ಮ ಶಕ್ತಿಯನ್ನು ಮರಳಿ ಪಡೆದುಕೊಳ್ಳೋಣ. ಸೋಲಿನಿಂದ ಯಾರಿಗೂ ಹಿಂಜರಿಕೆ ಬೇಡ. ನಾವು ಯಾರಿಗೂ ಮೋಸ ಮಾಡಿಲ್ಲ. ಯಾರ ಆಸ್ತಿ ಕಬಳಿಸಿಲ್ಲ” ಎಂದಿದ್ದಾರೆ.
“ಕ್ಷೇತ್ರದಲ್ಲಿ ಎಲ್ಲರಿಗಾಗಿ ದುಡಿದಿದ್ದೇನೆ. ಎಲ್ಲ ಊರುಗಳಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಜನರನ್ನು ಹೃದಯದಿಂದ ಪ್ರೀತಿಸಿದ್ದೇನೆ. ಹಾಗಾಗಿ, ಇಂತಹ ಸೋಲಿನಿಂದ ಎದೆಗುಂದುವುದಿಲ್ಲ. ಪ್ರತಿ ದಿನ ಸಂಘಟನೆಯಲ್ಲಿ ತೊಡಗಿಕೊಳ್ಳೋಣ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ. ಎಲ್ಲರನ್ನೂ ಜೋಡಿಸಿಕೊಂಡು ಹೋಗೋಣ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗೋಣ” ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಸುರೇಶ್ ಇಟಗಿ, ನಾಗೇಗೌಡ ಮನ್ಸೂರ್, ಮನೋಹರ ಬಾಂಡಗೆ, ಪ್ರಕಾಶ್ ಪಾಟೀಲ್, ಬಸವರಾಜ ತಳವಾರ ಉಪಸ್ಥಿತರಿದ್ದರು.