ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸಾಲಾಪೂರ ಗ್ರಾಮದ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ ಆಚರಿಸಿದರು.
ಮಕ್ಕಳ ದಿನಾಚರಣೆಯಲ್ಲಿ ಶಾಲೆಯ ಪ್ರಧಾನ ಮಂತ್ರಿಗಳು ಉಪ ಪ್ರಧಾನ ಮಂತ್ರಿಗಳು ಮತ್ತು ಶಾಲಾ ಸಂಸತ್ತಿನ ಮಂತ್ರಿಗಳು ವೇದಿಕೆಯ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟದ್ದು ವಿಶೇಷವಾಗಿತ್ತು ಹಾಗೂ ರಾಜ್ಯದ ಬೇರೆ ಬೇರೆ ಭಾಗದ ಕೃಷಿ ಜೀವನ ಶೈಲಿ ಬಿಂಬಿಸುವ ನೃತ್ಯಗಳನ್ನು ಮಾಡಿ ರಾಜ್ಯದ ಪ್ರಾದೇಶಿಕ ವೈವಿಧ್ಯತೆಯ ಪರಿಚಯ ಮಾಡಿಕೊಟ್ಟರು.
ಮಕ್ಕಳ ದಿನಾಚಾರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಧ್ಯಾರ್ಥಿನಿ ಮಹಾನಂದಾ ಜೋಗೆಲ್ಲಪ್ಪನ್ನವರ ಮಾತನಾಡಿ, ನೆಹರು ಅವರು ಮಕ್ಕಳ ಜೀವನದಲ್ಲಿ ಶಿಕ್ಷಣದ ಮಹತ್ವ ಪರಿಚಯಿಸಿದ ಶ್ರೇಷ್ಠ ಪ್ರಧಾನಿ ಎಂದು ತಿಳಿಸಿದರು.
ವಿದ್ಯಾರ್ಥಿನಿ ನತಾಷಾ ನದಾಫ ಮಾತನಾಡಿ, ಉತ್ತಮ ನಾಯಕರಾಗಿದ್ದವರು ಚಾಚಾ ಜವಾಹರಲಾಲ್ ನೆಹರು. ಮಕ್ಕಳ ಮೇಲೆ ಬಹಳ ಪ್ರೀತಿ ಹೊಂದಿದ್ದರು. ಅವರ ಜನ್ಮದಿನವನ್ನು ಮಕ್ಕಳ ದಿನಚಾರಣೆಯನ್ನಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ವಿದ್ಯಾರ್ಥಿನಿ ರೂಪಾ ಬಂಡಿವಡ್ಡರ ಮಾತನಾಡಿ, ನೆಹರು ಅವರು ನಮ್ಮ ದೇಶದ ಪ್ರಧಾನಿಗಳು. ಅವರ ಜನ್ಮದಿನ ಆಚರಿಸುತ್ತಿರುವುದು ಸಂತೋಷವಾಗಿದೆ. ನೆಹರು ಅವರು ದೇಶಕ್ಕಾಗಿ ಅಪಾರ ಕೂಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ಶಾಲಾ ಸಂಸತ್ತಿನ ಉಪ ಪ್ರಧಾನಿ ಶ್ರೇಯಾ ರಾಜನಾಳ ಮಾತನಾಡಿ, ಮಹಾನ್ ಚೇತನ ಜವಾಹರಲಾಲ್ ನೆಹರು ಶ್ರೀಮಂತರಾಗಿದ್ದರು ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. 1930ರಲ್ಲಿ ಪೂರ್ಣ ಸ್ವರಾಜ್ಯ ಹಾಗೂ ರಾವಿ ನದಿಯ ದಂಡೆಯ ಮೇಲೆ ರಾಷ್ಟ್ರ ದ್ವಜವನ್ನು ಹಾರಿಸಿ ಸ್ವಾತಂತ್ರ್ಯದ ದಿಕ್ಕನ್ನು ಬದಲಾಯಿಸಿದರು ಎಂದು ವಿವರಿಸಿದರು.
ವಿದ್ಯಾರ್ಥಿನಿ ಪ್ರಿಯಾ ಪೂಜೇರ ಮಾತನಾಡಿ, ಜವಾಹಾರಲಾಲ್ ನೆಹರು ಅವರು ಜೈಲುವಾಸ ಅನುಭವಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ನಂತರ ಪ್ರಧಾನಿಗಳಾಗಿ ಭಾರತ ಭವಿಷ್ಯದ ದೃಷ್ಠಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಪಂಚವಾರ್ಷಿಕ ಯೋಜನೆ,ಅಲಿಪ್ತ ನೀತಿ ಹಾಗೂ ವಿದೇಶಾಂಗ ನೀತಿಗಳನ್ನು ಜಾರಿಗೊಳಿಸಿದರು. ಮಕ್ಕಳಿಗಾಗಿ ಶೌರ್ಯ ಪ್ರಶಸ್ತಿ ಆರಂಭಿಸಿದ ಶ್ರೇಯಸ್ಸು ಜವಾಹರಲಾಲ್ ನೆಹರು ಅವರಿಗೆ ಸಲ್ಲುತ್ತದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಶಾಲೆಯ ಪ್ರಧಾನ ಗುರುಗಳಾದ ಎ.ಎಸ್ ಗಾಣಗಿ ಶಿಕ್ಷಕರು ಶಾಲೆಯ ವಾರ್ಷಿಕ ವರದಿಯನ್ನು ಓದಿದರು. ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೇ ಆಚರಿಸಿದ ಮಕ್ಕಳ ದಿನಾಚರಣೆ ಪೋಷಕರು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.
