ಕೇಂದ್ರ ಸರ್ಕಾರದ 25 ಮಂತ್ರಿಗಳ ಮೇಲೆ ಚಾರ್ಜ್‌ಶೀಟ್ ಮತ್ತು ಪ್ರಕರಣ ದಾಖಲಾಗಿವೆ. ಆದರೂ ಮಂತ್ರಿಗಳಾಗಿದ್ದಾರೆ, ಹೀಗಿರುವಾಗ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಲೋಕೊಪಯೊಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅನುಮತಿ ನೀಡಿರುವ ವಿಚಾರದ ಕುರಿತು ಬೆಳಗಾವಿಯಲ್ಲಿ ಮಾಧ್ಯಗಳ ಜೊತೆಗೆ ಮಾತನಾಡಿ, “ನಿರೀಕ್ಷೆಯಂತೆ ತನಿಖೆಗೆ ಅನುಮತಿ ಕೊಡುತ್ತಾರೆಂದು ಗೊತ್ತಿತ್ತು, ಕೊಟ್ಟಿದ್ದಾರೆ. ನಾವೂ ಕೂಡ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಸದ್ಯ ನಮ್ಮಮುಂದೆ ಇರುವುದು ಕಾನೂನು ಹೋರಾಟ. ರಾಜ್ಯಪಾಲರು ಅನುಮತಿ ಕೊಟ್ಟ ಒಂದು ದಿನಕ್ಕೆ ಏನೂ ಆಗಲ್ಲ. ಕಾಯ್ದು ನೋಡಬೇಕು” ಎಂದರು.
“ಬಿಜೆಪಿ ಹೈಕಮಾಂಡ್ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದೆ. ದೇಶದಲ್ಲಿ ಅನೇಕರು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ, ಸಿದ್ದರಾಮಯ್ಯ ಅವರಿಗೂ ಇದೇ ಪರಿಸ್ಥಿತಿ ಬಂದಿದೆ. ಅವರೂ ಕೂಡಾ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಹಾಗಾಗಿ, ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ನಾವೆಲ್ಲಾ ಗಟ್ಟಿಯಾಗಿ ಅವರ ಜೊತೆಗಿದ್ದೇವೆ. ಇಡೀ ಪಕ್ಷ ಅವರ ಜೊತೆ ಇರಬೇಕಾಗುತ್ತದೆ” ಎಂದರು.
ಮುಂದಿನ ಸಿಎಂ ನೀವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇರುವಾಗ ಆ ಪ್ರಶ್ನೆ ಬರುವುದಿಲ್ಲ. ಒಂದೇ ಸ್ಥಾನ ಇರುವಾಗ ಎರಡು ಸ್ಥಾನ ಎಲ್ಲಿಂದ ತರೋದು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ. ನಾವೂ ಕೂಡಾ ಸಿಎಂ ಆಗುವ ಪ್ರಶ್ನೆ ಬರುವುದಿಲ್ಲ. ಅದೇ ರೀತಿ ಬೇರೆ ಯಾರೂ ಸಿಎಂ ಆಗುವ ಪ್ರಶ್ನೆ ಕೂಡ ಬರೋದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ; ರಾಜ್ಯಪಾಲರ ಅಧಿಕಾರ ದುರುಪಯೋಗಕ್ಕೆ ಸಿಪಿಐಎಂ ಖಂಡನೆ
“ಜೊಲ್ಲೆ, ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡದ ಬಗ್ಗೆ ರಾಜಭವನದಲ್ಲಿ ಆ ಪ್ರಕರಣಗಳು ಬಾಕಿಯಿವೆ. ಇದನ್ನು ನಾವು ರಾಜಕೀಯವಾಗಿ ನೋಡಬೇಕು. ಹಾಗಾಗಿ, ಬಹಳ ಮಹತ್ವ ಕೊಡುವ ಅವಶ್ಯಕತೆ ಇಲ್ಲ” ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.