ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ ದಾಳಿಯಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಿ, 50 ಕೆಜಿ 452 ಗ್ರಾಂ ಗಾಂಜಾ ಹಾಗೂ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ ₹30 ಲಕ್ಷ ಎಂದು ಅಂದಾಜಿಸಲಾಗಿದೆ.
ಜೂನ್‌ನಲ್ಲಿ ಆರಂಭವಾದ ತನಿಖೆ
ಜೂನ್ ತಿಂಗಳಲ್ಲಿ ತಾಜೀಬ ಅಬ್ದುಲ್ ರಜಾಕ ಮುಲ್ಲಾ ಮತ್ತು ಅನುರಾಗ ಉದಯಕುಮಾರ ಯರಳಾನಕರರನ್ನು ಪೊಲೀಸರು ಬಂಧಿಸಿ, ಅವರಿಂದ 5.562 ಕೆಜಿ ಗಾಂಜಾ, ಮೊಬೈಲ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಮುಂಬೈಗೆ ತೆರಳಿ, ಮುಖ್ಯ ಆರೋಪಿ ಇಸ್ಮಾಯಿಲ್ ಸಯ್ಯದನ ಮಾವ ಅಬ್ದುಲಮಜೀದ ಅಬ್ದುಲಸತ್ಕಾರ ಮುಖಾದಮನ ಮನೆಯಿಂದ 2 ಕೆಜಿ 16 ಗ್ರಾಂ ಗಾಂಜಾ ಪತ್ತೆಹಚ್ಚಿ ಬಂಧಿಸಿದ್ದರು.
ಆಗಸ್ಟ್ 21ರಂದು ದೊಡ್ಡ ದಾಳಿ
ಆಗಸ್ಟ್ 21ರಂದು ಸದ್ದಾಂ (ಇಸ್ಮಾಯಿಲ್ ಸಯ್ಯದ) ಮತ್ತು ತಾಜೀರ್ ಗುಡುಸಾಬ ಬಸ್ತವಾಡೆ ತಮ್ಮ ಮಾವನನ್ನು ಹಿಂಡಲಗಾ ಜೈಲಿನಲ್ಲಿ ಭೇಟಿ ಮಾಡಲು ಬರಲಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ, ಇನ್ಸಪೆಕ್ಟರ್ ಆರ್. ಗಡ್ಡೆಕರ ನೇತೃತ್ವದ ತಂಡ ಸುಳಗಾ ಗ್ರಾಮದ ಬಳಿಯ ಚಂದಗಡ–ಬೆಳಗಾವಿ ರಸ್ತೆಯಲ್ಲಿ ದಾಳಿ ನಡೆಸಿತು.
ಈ ವೇಳೆ ಇಬ್ಬರ ಜೊತೆಗೆ ಗಾಂಜಾ, ಪಡ್ಲರ್‌ಗಳಾದ ಪ್ರಥಮೇಶ ದಿಲೀಪ ಲಾಡ್, ತೇಜಸ್ ಭೀಮರಾವ್ ವಾಜರ, ಶಿವಕುಮಾರ ಬಾಳಕೃಷ್ಣ ಆಸಬೆ ಮತ್ತು ರಮಜಾನ್ ದಸ್ತಗೀರ ಜಮಾದಾರರನ್ನು ಸಹ ಬಂಧಿಸಲಾಯಿತು.
ವಶಪಡಿಸಿಕೊಂಡ ವಸ್ತುಗಳು
ಗಾಂಜಾ : 50 ಕೆಜಿ 452 ಗ್ರಾಂ, (ಒಟ್ಟು) ಕಾರುಗಳು 2, ಮೋಟಾರ್ಸೈಕಲ್ 1, ಮೊಬೈಲ್‌ಗಳು 13, ಡಿಜಿಟಲ್ ತಕ್ಕಡಿ : 1
ಮಾರಕಾಸ್ತ್ರಗಳು ಹಾಗೂ ₹4,500 ನಗದು ಇತರ 11 ವಸ್ತುಗಳು
ರಾಜ್ಯಗಳ ನಡುವೆ ವಿಸ್ತರಿಸಿದ ಜಾಲ
ತನಿಖೆಯಿಂದ ಸದ್ದಾಂ (ಇಸ್ಮಾಯಿಲ್ ಸಯ್ಯದ) ತನ್ನ ಸಹಚರರೊಂದಿಗೆ ಮಧ್ಯಪ್ರದೇಶದಿಂದ ಗಾಂಜಾ ಖರೀದಿಸಿ ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಬೆಂಗಳೂರು, ಗೋವಾ ಹಾಗೂ ಪಕ್ಕದ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದನೆಂಬುದು ಬೆಳಕಿಗೆ ಬಂದಿದೆ. ಇವನ ವಿರುದ್ಧ ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಹಾಗೂ ಮಹಾರಾಷ್ಟ್ರದ ಪೂಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.