ಬೆಳಗಾವಿ ಜಿಲ್ಲೆಯ ಸವದತ್ತಿಯ ಸರ್ಕಾರಿ ಶಾಕೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕದ ನಿಯೋಗವು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಭೇಟಿ, ದೂರು ಸಲ್ಲಿಸಿತು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ವರ್ಗಾವಣೆಯ ದುರುದ್ದೇಶದಿಂದ ಮಕ್ಕಳು ಕುಡಿಯುವ ಶಾಲಾ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿ, ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಸೂಕ್ತ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿರುತ್ತಾರೆ. ಸುಮಾರು 15 ದಿನಗಳ ಹಿಂದೆ ನಡೆದ ಈ ಘಟನೆಯಿಂದ ಅನೇಕ ಮಕ್ಕಳು ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಏನೂ ಅರಿಯದ ಮುಗ್ಧ ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಈ ಕೃತ್ಯಕ್ಕೆ ಆರೋಪಿಗಳು ಅದೇ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯನ್ನು ಬಳಸಿಕೊಂಡು ಶಾಲಾ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ್ದು, ಅತ್ಯಂತ ಹೇಯ ಕೃತ್ಯವಾಗಿದೆ, ಇದು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕವನ್ನು ವ್ಯಕ್ತಪಡಿಸಿತು.
ಈ ಹೀನ ಕೃತ್ಯವು ಇಡೀ ನಾಗರಿಕ ಸಮಾಜಕ್ಕೆ ದಿಗ್ಭ್ರಮೆ ಮೂಡಿಸಿದೆ ಮತ್ತು ಶಾಲಾ ವಾತಾವರಣದ ಬಗೆಗೆ ಆತಂಕ ಸೃಷ್ಟಿಯಾಗಿದೆ. ಎಳೆಯ ಮಕ್ಕಳ ಮನಸ್ಸಿನ ಮೇಲೆ ತೀರಾ ನಕಾರಾತ್ಮಕ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲದೇ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುವುದು ಅತ್ಯಂತ ಗಂಭೀರ ವಿಷಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರು ನಡೆಸುತ್ತಿರುವ ವಿಚಾರಣೆಯ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಬೇಕು. ಆರೋಪಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಬೇಕು ಎಂಬುದನ್ನು ಆಯೋಗವು ಖಚಿತಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಯಿತು.
ಇದನ್ನು ಓದಿದ್ದೀರಾ? ವಿಷ ಹಾಕಿ ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದ್ದು ಭಯೋತ್ಪಾದಕ ಕೃತ್ಯ: ಹನೀಫ್ ಖಾನ್ ಕೊಡಾಜೆ
ಬಹಳ ಪ್ರಮುಖವಾಗಿ ಈ ಘಟನೆ ನಡೆದ ಶಾಲೆಗೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನಿಯೋಗವು ಭೇಟಿ ನೀಡಿ ಘಟನೆಯ ಪರಿಪೂರ್ಣ ಮಾಹಿತಿ ಪಡೆದು ಪ್ರಕರಣದ ಆಗು-ಹೋಗುಗಳನ್ನು ಮೇಲ್ವಿಚಾರಣೆ ನಡೆಸಬೇಕು. ಜೊತೆಗೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಮಕ್ಕಳಿಗೆ ಭೇಟಿಯಾಗಿ ಪೋಷಕರಿಗೆ ಆತ್ಮಸ್ಥೈರ್ಯ ನೀಡಬೇಕೆಂದು ಪತ್ರದ ಮೂಲಕ ಆಗ್ರಹಿಸಲಾಯಿತು.
ನಿಯೋಗದಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಇದರ ರಾಜ್ಯ ಸಹ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ, ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಹಯಾನ್ ಕುದ್ರೋಳಿಯವರು ಪ್ರತಿನಿಧಿಸಿದ್ದರು.
