ಬರ ಪ್ರದೇಶಗಳ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸರ್ಕಾರದ ತಂಡವು ನಮ್ಮ ಸಮಸ್ಯೆಗಳನ್ನು ಆಲಿಸಲಿಲ್ಲವೆಂದು ಆರೋಪಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲಕುಪ್ಪಿ ಗ್ರಾಮದ ರೈತ ಅಪ್ಪಾಸಾಹೇಬ ಲಕ್ಕುಂಡಿ ಎಂಬವರು ಶುಕ್ರವಾರ ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಕಲಕುಪ್ಪಿಯಲ್ಲಿ ಕೆಲವು ರೈತರೊಂದಿಗೆ ಚರ್ಚಿಸಿದ ಅಧಿಕಾರಿಗಳು, ಸವದತ್ತಿ ತಾಲೂಕಿಗೆ ಹೊರಟಿದ್ದಾರೆ. ಈ ವೇಳೆ, ತಮ್ಮ ಸಮಸ್ಯೆಯನ್ನು ಆಲಿಸಲಿಲ್ಲವೆಂದು ಆರೋಪಿಸಿ ರೈತ ಅಪ್ಪಾಸಾಹೇಬ ಕೀಟನಾಶಕದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆತನಿಂದ ಕೀಟನಾಶಕದ ಬಾಟಲಿಯನ್ನು ಕಸಿದುಕೊಂಡಿದ್ದಾರೆ.
“ನಾನು 40 ಎಕರೆ ಭೂಮಿಯಲ್ಲಿ ಶೇಂಗಾ, ಹುರಳಿ, ಸೋಯಾಬೀನ್ ಬೆಳೆದಿದ್ದೇನೆ. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಆದರೆ, ನಮ್ಮ ಸಂಕಷ್ಟವನ್ನು ಯಾರು ಕೇಳುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು” ಎಂದು ಆ ರೈತ ಒತ್ತಾಯಿಸಿದ್ದಾರೆ.