ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತೇನೆ ಎಂದು ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಗಂಗಪ್ಪ ಕಲ್ಲಪ್ಪ ಕೋಲಕಾರ ತಿಗಡೊಳ್ಳಿ ಗ್ರಾಮದ ಆರೋಪಿಯಾಗಿದ್ದು, ಬಾಲಕಿಯನ್ನು ಪುಸಲಾಯಿಸಿ, ಪ್ರೀತಿಸುತ್ತೆನೆ ಎಂದು ನಂಬಿಸಿದ್ದನಲ್ಲದೆ, 2017ರ ಸೆಪ್ಟೆಂಬರ್‌ನಲ್ಲಿ ಬೈಕ್ ಮೇಲೆ ಅಪಹರಿಸಿಕೊಂಡು ಮಹಾರಾಷ್ಟ್ರದ ತಾಸಗಾಂವ ಎಂಬಲ್ಲಿ ಕಟ್ಟಡವೊಂದರಲ್ಲಿ ಇರಿಸಿದ್ದ. ಅಲ್ಲಿಯೇ ಪದೇಪದೇ ಅತ್ಯಾಚಾರ ಎಸಗಿದ್ದನು ಎಂದು ಹೇಳಲಾಗಿದೆ. ವಿಷಯ ತಿಳಿದ ನಂತರ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ತನಿಖಾಧಿಕಾರಿ ರಾಘವೇಂದ್ರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಬೆಳಗಾವಿ | ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ: ವಾಲ್ಮೀಕಿ ಸಮ್ಮೇಳನದಲ್ಲಿ ನಿರ್ಣಯ
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ವಿಚಾರಣೆ ನಡೆಸಿದ ನಂತರ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ತೀರ್ಪು ನೀಡಿದ್ದು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ₹1 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.