ಬೆಳಗಾವಿ ಜಿಲ್ಲೆಯಲ್ಲಿ ಹೊಸ ತಾಲೂಕಾಗಿ ಕಾಗವಾಡ ರಚನೆಯಾಗಿ ಆರು ವರ್ಷಗಳು ಕಳೆದಿವೆ. ಆದರೂ, ಇನ್ನೂ ತಾಲೂಕು ಮಟ್ಟದ ಯಾವುದೇ ಕಚೇರಿಗಳು ಪ್ರಾರಂಭವಾಗಿಲ್ಲ. ಶೀಘ್ರವೇ ಕಚೇರಿಗಳನ್ನು ಸ್ಥಾಪಿಸುವಂತೆ ಒತ್ತಾಯಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಕಚೇರಿಗಳನ್ನು ತೆರೆಯುವ ಕುರಿತು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸುತ್ತೇನೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಕಾಗವಾಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತದ ಅಧಿಕಾರಿಗಳ ಜತೆ ಶಾಸಕ ರಾಜು ಕಾಗೆ ಸಭೆ ನಡೆಸಿದ್ದಾರೆ. “ಈ ಹಿಂದೆಯೂ ನಾನು ಶಾಸಕನಾಗಿದ್ದಾಗ ಕಾಗವಾಡ ತಾಲೂಕು ಘೋಷಣೆಯಾಗಿತ್ತು. ಪ್ರಸ್ತುತ ಮತ್ತೆ ನಾನು ಶಾಸಕನಾಗಿದ್ದೇನೆ. ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ. ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ನಿರ್ಣಯ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
ಸಭೆಯಲ್ಲಿ ತಹಶೀಲ್ದಾರ್ ರಾಜೇಶ ಬುರ್ಲಿ, ಸಂಜೀವಕುಮಾರ್ ಸದಲಗೆ, ಮಹಾಂತೇಶ ಕವಲಾಪುರ, ಸುನೀಲ ಬಬಲಾದಿ, ಎಂ.ಎಸ್.ಪೂಜಾರಿ,ಪ್ರವೀಣ ಪಾಟೀಲ, ಎಂ.ಆರ್.ಮುಂಜೆ, ಕೆ.ಕೆ.ಗಾವಡೆ, ಕರವೇ ಸಂಘಟನೆಯ ಸಿದ್ದು ಒಡೆಯರ, ನ್ಯಾಯವಾದಿಗಳ ಸಂಘದ ಎಸ್.ಆರ್.ನಿಂಬಾಳಕರ, ಅಮರ ಕಮತೆ, ಬಿ.ಜಿ.ಮೋಳೆ ಸೇರಿದಂತೆ ಅನೇಕರು ಉಪಸ್ದಿತರಿದ್ದರು.