ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಗ್ಗೆ ದೇಶದ ಜನರಿಗೆ ಮಾಹಿತಿ ನೀಡಿದವರಲ್ಲಿ ಕರ್ನಲ್ ಸೋಫಿಯಾ ಖುರೇಶಿ ಕೂಡ ಒಬ್ಬರು. ಅವರನ್ನು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ಅವರು ಉಗ್ರರ ಸಹೋದರಿ ಎಂದು ಹೇಳಿ, ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ನಡುವೆ, ಸೋಫಿಯಾ ಅವರ ಪತಿಯ ತವರೂರು ಬೆಳಗಾವಿ ಜಿಲ್ಲೆಯ ಕೊಣ್ಣೂರು ಗ್ರಾಮದಲ್ಲಿರುವ ಅವರ ಮನೆ ಮನೆಯ ಮೇಲೆ ಆರ್‌ಎಸ್‌ಎಸ್ ಮುಖಂಡರು, ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ ವದಂತಿಯಲ್ಲಿ ತಳ್ಳಿಹಾಕಿದ್ದಾರೆ.
ಸೋಫಿಯಾ ಅವರು ಪತಿ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕುಟುಂಬಸ್ಥರು ಬೆಳಗಾವಿಯ ಕೊಣ್ಣೂರು ಗ್ರಾಮದಲ್ಲಿ ನೆಲೆಸಿದ್ದಾರೆ. ಅವರ ಮನೆಯ ಮೇಲೆ ಆರ್‌ಎಸ್‌ಎಸ್ ದಾಳಿ ನಡೆಸಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವರದಿ ಓದಿದ್ದೀರಾ?:ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು: ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ
ಅನೀಸ್ ಉದ್ದೀನ್ ಎಂಬಾತ ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ, ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವಾರು ನೆಟ್ಟಿಗರು ಆ ಪೋಸ್ಟ್ ಸತ್ಯವೆಂದು ನಂಬಿ, ಹಲವರು ಆರ್‌ಎಸ್‌ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್‌ಪಿ ಭೀಮಾಶಂಕರ್ ಗುಳೇದ್, “ಕರ್ನಲ್ ಸೋಫಿಯಾ ಖುರೇಶಿ ಅವರ ಕುಟುಂಬಸ್ಥರ ಮನೆ ಮೇಲೆ ಆರ್‌ಎಸ್‌ಎಸ್ ದಾಳಿ ನಡೆಸಿದೆ ಎಂಬುದು ಸಂಪೂರ್ಣ ಸುಳ್ಳು. ಇಂತಹ ಸುಳ್ಳು, ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು” ಎಂದು ತಿಳಿಸಿದ್ದಾರೆ. ಅಲ್ಲದೆ, ಸೋಫಿಯಾ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರ ಮನೆಗೆ ಭದ್ರತೆ ನೀಡಿದ್ದಾರೆ.