ಬೆಳಗಾವಿ ನಗರದ ಸಾಯಿ ಕಾಲೋನಿಯಲ್ಲಿ ಕಳೆದ ಆರು ತಿಂಗಳಿಂದ ಚರಂಡಿ ಅವ್ಯವಸ್ಥೆ ಕುರಿತ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಚರಂಡಿ ಅಧ್ವಾನವಾಗಿರುವ ಪರಿಣಾಮ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಈ ಸಮಸ್ಯೆಯನ್ನು ಅನೇಕ ಬಾರಿ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸಮಸ್ಯೆಯಿಂದ ಹತ್ತಿರದ ಆಸ್ಪತ್ರೆಗಳಿಗೆ ಹೋಗುವವರು, ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ. ಆರೋಗ್ಯ ಸಮಸ್ಯೆಗಳ ಭೀತಿ ಕೂಡ ವ್ಯಕ್ತವಾಗಿದೆ.
ಈ ಕುರಿತು ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿದ ಕಾರ್ಪೊರೇಟರ್, “ಈ ಚರಂಡಿಗಳು ಅಮೃತ್ ಯೋಜನೆಯಡಿ ನಿರ್ಮಾಣವಾಗಿದ್ದು, ನಾವು ಸಮಸ್ಯೆಯ ಬಗ್ಗೆ ಮೇಲ್ದರ್ಜೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.

“ಸುಮಾರು ಎರಡು ವರ್ಷಗಳಿಂದ ಇಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ನೀರು ರಸ್ತೆಯ ಮೇಲೆ ಬರುತ್ತಿದ್ದು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಮಕ್ಕಳಿಗೆ, ವೃದ್ಧರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆ ಕೇಳುವವರು ಯಾರೂ ಇಲ್ಲದಂತಾಗಿದೆ. ಕಾರ್ಪೋರೇಶನ್ ಅಧಿಕಾರಿಗಳು ಇದು ನಮ್ಮ ಜವಾಬ್ದಾರಿಯಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯ ನಿವಾಸಿ ರುಕ್ಮಿಣಿ ಈದಿನ ಮುಖಾಂತರ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

“ಚರಂಡಿ ನೀರು ರಸ್ತೆ ಮೇಲೆ ಬರುತ್ತಿದ್ದು ಇಲ್ಲಿನ ಜನರ ಆರೋಗ್ಯ ಹಾಳಾಗುತ್ತಿದೆ. ಸಂಜೆಯಾದರೆ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ. ಜನಪ್ರತಿನಿಧಿಗಳಂತೂ ಓಟು ಪಡೆದ ಮೇಲೆ ಇತ್ತ ಹೆಜ್ಜೆ ಇಡುವುದೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು ಅಲ್ಲಿನ ನಿವಾಸಿ ಶಾಂತಾ.
ಶಕುಂತಲಾ ಮಾತನಾಡಿ, “ಕಾಲ ಕಾಲಕ್ಕೆ ಸರಿಯಾಗಿ ಚರಂಡಿಯನ್ನು ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ಚರಂಡಿ ನೀರು ರಸ್ತೆಗೆ ಬರುತ್ತದೆ. ಚರಂಡಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಚರಂಡಿ ನೀರನ್ನು ಹೊರಗಡೆ ಹೋಗುವ ಹಾಗೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸಮಸ್ಯೆ ಬಗೆ ಹರಿಸಿಲ್ಲ” ಎಂದು ತಿಳಿಸಿದರು.

ಸಾಯಿ ಕಾಲೋನಿಯಲ್ಲಿ ಹಲವು ವರ್ಷಗಳಿಂದ ಚರಂಡಿ ಅವ್ಯವಸ್ಥೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದು. ಈ ಅವ್ಯವಸ್ಥೆಗೆ ಇಲ್ಲಿನ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣ. ಆದಷ್ಟು ಬೇಗನೆ ಚರಂಡಿ ವ್ಯವಸ್ಥೆ ಸರಿಪಡಿಸಿ ಜನರ ಆರೋಗ್ಯ ಕಾಪಾಡುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ.
ಇದನ್ನೂ ಓದಿ: ಬೆಳಗಾವಿ | ಶಾಸಕರ ಸಂಬಂಧಿಯ ಕಾರು ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು