ಬಸವಣ್ಣನವರ ವಚನಗಳ ಸಂದೇಶಗಳನ್ನು ಯುವಕರಿಗೆ ಮುಟ್ಟಿಸಬೇಕಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿ ಶಹಾಪುರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ ಹಾಗೂ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ, ದಾನಮ್ಮದೇವಿ ಮಂದಿರ ಟ್ರಸ್ಟ್ ಸಹಯೋಗದಲ್ಲಿ ‘ಬಸವ ವಾಹಿನಿ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಶತಶತಮಾನಗಳವರೆಗೆ ನಾವು ಬಸವಣ್ಣನವರನ್ನು ರಾಜ್ಯದ ಆಚೆಗೆ ಬಿಟ್ಟುಕೊಡಲಿಲ್ಲ. ಇಂದು ಅವರ ಸಂದೇಶಗಳು ವಿಶ್ವಮಾನ್ಯವೆನಿಸಿವೆ. ಇಂದಿನ ಯುವಜನಾಂಗಕ್ಕೆ ಅದನ್ನು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಧಾರವಾಡ ವಿ.ವಿ ಬಸವಪೀಠಕ್ಕೆ ಎಸ್.ವಿ.ಬೆಂಬಳಗಿಯವರ ಕೊಡುಗೆ ಅಪಾರವಾಗಿದೆ. ಮುರಗೋಡದ ಮಹಾಂತಜ್ಜನವರ ಭಕ್ತರಾಗಿ ಅವರ ಕಾರ್ಯವನ್ನು ಬಸವಪೀಠದ ಮೂಲಕ ಯಶಸ್ವಿಯಾಗಿ ನೆರವೇರಿಸಿದರು” ಎಂದು ಸ್ಮರಿಸಿದರು.

‘ಬಸವಣ್ಣ ಸಾಂಸ್ಕೃತಿಕ ನಾಯಕ’ ವಿಷಯದ ಮೇಲೆ ವಿದ್ವಾಂಸ ವಿ.ಎಸ್.ಮಾಳಿ ಮಾತನಾಡಿ, “ಮತ, ಮೌಢ್ಯ, ಅಜ್ಞಾನ ತ್ರಿವಿಧ ಮಲಗಳನ್ನು ತೊಳೆದು ನಮ್ಮ ಹೃದಯದಲ್ಲಿ ಭಕ್ತಿಜ್ಞಾನ ಸುಜಲವನ್ನು ತುಂಬಿದವರು ಬಸವಣ್ಣನವರು. ಕನ್ನಡ ಕುಲಕೋಟಿಯ ಸಂಸ್ಕೃತಿಯ ಕುಲಪತಿ ಬಸವಣ್ಣ” ಎಂದರು.
“ರಾಜ್ಯ ಸರ್ಕಾರವು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ರಾಜ್ಯದ ಯಾವುದೇ ಸಮುದಾಯವರು ವಿರೋಧ ಮಾಡಲಿಲ್ಲ. ಕಾರಣ ಬಸವಣ್ಣನವರು ಎಲ್ಲರಿಗೂ ಮಹಾತ್ಮ. ಎಲ್ಲರೂ ತನುಮನದಿಂದ ಒಪ್ಪಿಕೊಂಡ ಮಹಾನ್ ಶರಣ” ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಕೆ.ಬಿ.ಗುಡಸಿ, ಬಸವಪೀಠ ಕಳೆದ 50 ವರ್ಷಗಳಿಂದ ಮಹತ್ತರ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದು ತಿಳಿಸಿದರು.
ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಸ್ವಾಮೀಜಿ, ಧಾರವಾಡ ಮುರಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುರಗೋಡ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮಿಗಳು ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಕೆಎಲ್‌ಇ ಸಂಸ್ಥೆಯಲ್ಲಿ 40 ವರ್ಷ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಭಾಕರ ಕೋರೆ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬಸವಪೀಠದ ಸಂಯೋಜಕ ಸಿ.ಎಂ.ಕುಂದಗೋಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದನ್ನು ಓದಿದ್ದೀರಾ? ಧಾರವಾಡ | ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಂ. ಕಿತ್ತೂರ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಎ.ಎಸ್.ಪಾಟೀಲ, ಎಂ.ಜಿ.ಬೊಳಮಲ್ಲ, ಡಾ.ಎಂ.ಎಸ್.ಉಮದಿ, ಎಸ್.ವಿ.ಬಾಗಿ, ಸಚಿನ ಖಡಬಡಿ ಹಾಗೂ ಪದಾಧಿಕಾರಿಗಳು ಇದ್ದರು.
