ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದಾರೆಂಬ ಅರೋಪದ ಮೇಲೆ ಹಿಂದುತ್ವವಾದಿ ಕೋಮು ಕಾರ್ಯಕರ್ತರು ಲಾರಿ ಚಾಲನ ಮೇಲೆ ಹಲ್ಲೆ ನಡೆಸಿ, ಅನೈತಿಕ ಪೊಲೀಸ್‌ಗಿರಿ ಮರೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಬೆಳಗಾವಿಯ ಸುವರ್ಣಸೌಧ ಎದುರು ಹಿಂದುತ್ವವಾದಿ ಕೋಮು ಕಾರ್ಯಕರ್ತರು ತಡೆದಿದ್ದಾರೆ. ಲಾರಿ ಮೇಲೆ ಕಲ್ಲು ತೂರಾಟ ನಡೆಸಿ, ದಾಂಧಲೆ ನಡೆಸಿದ್ದಾರೆ. ಹಿಂದುತ್ವವಾದಿಗಳ ದಾಂಧಲೆಯನ್ನು ಪ್ರಶ್ನಿಸಿದ ಲಾರಿ ಚಾಲನ ಉಮರ್ ಮೋಯಿದ್ದೀನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಲಾರಿ ಚಾಲಕ ಉಮರ್ ತಲೆ, ಬೆನ್ನು, ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ, ಲಾರಿ ಎಲ್ಲಗೆ ಹೋಗುತ್ತಿತ್ತು ಎಂಬ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆ, ಆ ಬಗ್ಗೆಯೂ ಪ್ರಕರಣ ದಾಖಲಿಸುತ್ತೇವೆ” ಎಂದು ಡಿಸಿಪಿ ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, “ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.