ವಿಡಿಯೊ ಕಾಲ್‌ಗಳ ಮೂಲಕ ವ್ಯಕ್ತಿಗತ ದೃಶ್ಯಗಳನ್ನು ಬಳಸಿಕೊಂಡು ಶಿಕ್ಷಕಿಯೊಬ್ಬರಿಂದ ₹13.75 ಲಕ್ಷ ಹಣ ವಂಚಿಸಿರುವ ಗಂಭೀರ ಪ್ರಕರಣ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ದಾವನಕಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಕುರಿತಂತೆ ಜಿಲ್ಲಾ ಸೈಬರ್ ಅಪರಾಧ ವಿಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅದೇ ಗ್ರಾಮದ ಶಿವನಾಯಕ ಯಳ್ಳೂರೆ ಎಂಬಾತ ಶಿಕ್ಷಕಿಯೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಾನೆ. ಶಿಕ್ಷಕಿ ತನ್ನ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಆರೋಪಿ ಜೊತೆ ಹಂಚಿಕೊಂಡಿದ್ದರು. ಈ ಸಂದರ್ಭಗಳಲ್ಲಿ ಆರೋಪಿ ವಿಡಿಯೊ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡು, ನಂತರ ಅವನ್ನು ಬಳಸಿಕೊಂಡು ಬೆದರಿಕೆ ನೀಡಲು ಮುಂದಾಗಿದ್ದಾನೆ.
ಈ ವಿಡಿಯೋಗಳನ್ನು ಮುಂದಿಟ್ಟುಕೊಂಡು ಆರೋಪಿ ಶಿಕ್ಷಕಿಗೆ ₹15 ಲಕ್ಷ ಬೇಡಿಕೆ ಇಟ್ಟು, ಹಣ ಕೊಡದಿದ್ದಲ್ಲಿ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಶಿಕ್ಷಕಿಯ ಪತಿಗೂ ಸಂಪರ್ಕಿಸಿ ಹಣ ನೀಡುವಂತೆ ಒತ್ತಡ ಹೇರಿದ್ದಾನೆ.
2024ರ ಏಪ್ರಿಲ್ ತಿಂಗಳಿನಿಂದ ಇದುವರೆಗೆ ಶಿಕ್ಷಕಿ ಒಟ್ಟು ₹7.75 ಲಕ್ಷ ನಗದು ಹಾಗೂ ₹5 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ₹13.75 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ | ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ; ಇಬ್ಬರು ಯುವಕರ ಬಂಧನ
ವಿಷಯ ಶಿಕ್ಷಕಿಯ ಮೈದುನನಿಗೆ ಗೊತ್ತಾದ ಬಳಿಕ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಸದ್ಯಕ್ಕೆ ಈ ಕುರಿತು ಜಿಲ್ಲಾ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.