ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಟಕುರ್ಕಿ IGRS ವಸತಿ ಶಾಲೆಯ ವಿದ್ಯಾರ್ಥಿಗಳು ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 57 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು, ಇವರಲ್ಲಿ 10 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.
ಹಿಂದಿ ವಿಷಯದಲ್ಲಿ 16 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ಶಾಲೆಯ ಹೆಗ್ಗಳಿಕೆಗೆ ಕಾರಣವಾಗಿದೆ. ಪ್ರಥಮ ಭಾಷೆ ಕನ್ನಡದಲ್ಲಿ 2 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಭಾಷೆಯಲ್ಲಿ 1 ವಿದ್ಯಾರ್ಥಿ ಶತಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿ ಮುತ್ತಪ್ಪ ಹೊಸಕೋಟಿ 612 ಅಂಕಗಳು (97.92%) ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಸುಪ್ರೀಯಾ ಕರಿಮರಿ ಮತ್ತು ದರ್ಶನ್ ಕಮ್ಮಾರ 610 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಭಾರತಿ ಪಮಾರ್ 609 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಸಾಧನೆಗೆ ಶಾಲೆಯ ಪ್ರಾಚಾರ್ಯರು, ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.




