ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ ಜತೆ ಗೃಹ ಸಚಿವ ಜಿ. ಪರಮೇಶ್ವರ್ ಬೆಟ್ಟಿಂಗ್ ಕಟ್ಟಿದ್ದ ಆರೋಪದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರ ಬೆಟ್ಟಿಂಗ್‌ನಲ್ಲಿ ಗೃಹ ಸಚಿವರು ತೊಡಗಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಗೃಹ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಲು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿತ್ತು. ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿ ಠಾಣೆಯಲ್ಲಿ ದಾಖಲಿಸುವಂತೆ ಆದೇಶಿಸಿತ್ತು.
ಇದನ್ನು ಓದಿದ್ದೀರಾ? ತುಮಕೂರು | ಬೆಟ್ಟಿಂಗ್ : ಗೃಹ ಸಚಿವರ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಸೂಚನೆ
ಆದರೆ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪರಮೇಶ್ವರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿಚಾರಣೆ ವೇಳೆ ಪರಮೇಶ್ವರ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದ್ದಾರೆ. “ಪರಮೇಶ್ವರ್ ಅವರು ಕಬಡ್ಡಿ ಟೂರ್ನಿಯ ಮುಖ್ಯ ಅತಿಥಿಯಾಗಿದ್ದರು. ವಿಜಯಪುರ ತಂಡ ಗೆಲ್ಲುತ್ತದೆಂದು 500 ರೂ. ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿದ್ದಾರೆ. ಸೋತ ತಂಡಕ್ಕೆ ಬೇಸರವಾಗಬಾರದು ಎಂಬ ಕಾರಣಕ್ಕೆ ಪರಮೇಶ್ವರ್ ಹೀಗೆ ಹೇಳಿದ್ದರು. ಇದನ್ನೇ ಅಪರಾಧವೆಂಬಂತೆ ಬಿಂಬಿಸಿ ಖಾಸಗಿ ದೂರು ದಾಖಲಿಸಲಾಗಿದೆ” ಎಂದು ವಾದಿಸಿದ್ದರು.
ವಾದ ಆಲಿಸಿದ ನ್ಯಾಯಪೀಠ, “ತಮಾಷೆಗಾಗಿ ಮಾತನಾಡಿದರೂ ಪ್ರಕರಣ ಹಾಕಬಹುದೇ? ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ” ಎಂದು ಹೇಳಿದೆ.
ಏನಿದು ಬೆಟ್ಟಿಂಗ್ ಪ್ರಕರಣ?
ಕಳೆದ ಅಕ್ಟೋಬರ್ ತಿಂಗಳಲ್ಲಿ ತುಮಕೂರಿನಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆದಿತ್ತು. ಈ ವೇಳೆ ಚಿಕ್ಕೋಡಿ-ವಿಜಯಪುರ ತಂಡಗಳ ನಡುವಿನ ಫೈನಲ್ ಪಂದ್ಯ ನಡೆಯುತಿತ್ತು. ಈ ವೇಳೆ ಚಿಕ್ಕೋಡಿ ತಂಡ ಗೆಲ್ಲುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ವಿಜಯಪುರ ಗೆಲ್ಲುತ್ತದೆ ಎಂದು 500 ರೂ. ಬಾಜಿ ಕಟ್ಟಿದರು. ಆದರೆ, ವಿಜಯಪುರ ತಂಡ ಗೆದ್ದಿತ್ತು. ಹಾಗಾಗಿ ಬೆಟ್ಟಿಂಗ್ ನಿಯಮದಂತೆ ಗೃಹ ಸಚಿವರು 500 ರೂ. ಗಳನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ಗೆ ಕೊಟ್ಟಿದ್ದರು. ಈ ಬೆಟ್ಟಿಂಗ್ ವಿಚಾರಗಳನ್ನು ಸ್ವತಃ ಗೃಹ ಸಚಿವರೇ ವೇದಿಕೆ ಭಾಷಣದಲ್ಲಿ ಬಹಿರಂಗಪಡಿಸಿದ್ದರು.
ರಾಜ್ಯದ ಗೃಹ ಸಚಿವರೇ ಬಹಿರಂಗವಾಗಿ ಬೆಟ್ಟಿಂಗ್ ಆಡಿದನ್ನು ವಿರೋಧಿಸಿದ ಸಾಮಾಜಿಕ ಕಾರ್ಯಕರ್ತ ಹಂದರಾಳು ನಾಗಭೂಷಣ್, ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಕೋರ್ಟ್ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ ಇದೀಗ ಹೈಕೋರ್ಟ್ ತಡೆ ನೀಡಿದೆ.





