ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಹತ್ಯೆಯನ್ನು ಪ್ರತಿಭಟಿಸಿ ಸ್ಥಳೀಯ ಮತದಾರರು ಒಗ್ಗಟ್ಟಿನಿಂದ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದರಿಂದಾಗಿ ಈ ಬೂತ್‌ನಲ್ಲಿ ಶೂನ್ಯ ಮತದಾನವಾಗಿದೆ. ಗ್ರಾಮದಲ್ಲಿ ಸುಮಾರು 974 ಮತದಾರರು ವಾಸಿಸುತ್ತಿದ್ದಾರೆ.
ಇತ್ತೀಚೆಗೆ ಈ ಭಾಗದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರ ಹತ್ಯೆಯಾಗಿತ್ತು. ಈ ಕೊಲೆಯು ಜಾತೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮತ್ತು ತಮ್ಮ ಸಮುದಾಯಕ್ಕೆ ರಕ್ಷಣೆ ನೀಡಲು ವಿಫಲವಾದ ಸರ್ಕಾರದ ನಡೆಯನ್ನು ಖಂಡಿಸಿ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ಜಾತಿ ತಾರತಮ್ಯವೂ; ಕರಾಳ ಮುಖ ಬಿಚ್ಚಿಟ್ಟ ದಲಿತ ಇಂಜಿನಿಯರ್ ಕೆವಿನ್ ಹತ್ಯೆಯೂ
ಬೆಳಿಗ್ಗೆಯಿಂದ ಸಂಜೆಯವರೆಗೆ ಮತಗಟ್ಟೆ ಅಧಿಕಾರಿಗಳು ಕಾಯುತ್ತಿದ್ದರೂ, ಒಬ್ಬೇ ಒಬ್ಬ ಮತದಾರರೂ ಮತ ಚಲಾಯಿಸಲು ಬಂದಿಲ್ಲ ಎಂದು ವರದಿಯಾಗಿದೆ. ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, “ನ್ಯಾಯ ಸಿಗುವವರೆಗೂ ಮತವಿಲ್ಲ” ಎಂದು ಗ್ರಾಮಸ್ಥರು ತಮ್ಮ ನಿಲುವಿಗೆ ಬದ್ಧರಾಗಿ ನಿಂತಿದ್ದಾರೆ.
ಹತ್ಯೆಗೀಡಾದ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ಪರಿಹಾರ ನೀಡಬೇಕು. ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯಲು ಶಾಶ್ವತ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತೆ ಒದಗಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.





