ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ನನ್ನು 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿನ ಕಚೇರಿಗೆ ಆರೋಪಿಯನ್ನು ಕರೆತಂದಿದ್ದು, ವಿಚಾರಣೆ ಮಾಡಬೇಕಿದೆ. ಶಿವಾನಂದ ನೀಲಣ್ಣವರ್ ಬಳಿ 35,000 ಮಂದಿ ಹೂಡಿಕೆ ಮಾಡಿದ್ದು, ಒಂದು ಸಾವಿರ ಕೋಟಿಗೂ ಅಧಿಕ ಹಣದ ವ್ಯವಹಾರ ನಡೆದಿದೆ. ಹೀಗಾಗಿ 10 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಐಡಿ ವಕೀಲರ ಮನವಿ ಮೇರೆಗೆ ಆರೋಪಿಯನ್ನು ಕಸ್ಟಡಿಗೆ ನೀಡಿ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾ. ಗಂಗಾಧರ ಅವರು ಆದೇಶಿಸಿದ್ದಾರೆ.
ನ್ಯಾಯಾಧೀಶರು, ಆರೋಪಿ ಶಿವಾನಂದ ನೀಲಣ್ಣವರ್ ಆರೋಗ್ಯದ ಬಗ್ಗೆ ವಿಚಾರಿಸಿದ್ದು, ತನಗೆ ಬಿಪಿ ಇರುವುದಾಗಿ ನೀಲಣ್ಣವರ್ ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾರೆ. ಆಗ, ಸಂಬಂಧಪಟ್ಟ ವೈದ್ಯರಿಂದ ನಿಮಗೆ ಮಾತ್ರೆ ಸೇರಿ ಎಲ್ಲ ವ್ಯವಸ್ಥೆ ಮಾಡುತ್ತಾರೆ ಎಂದು ನ್ಯಾಯಾಧೀಶರು ಆರೋಪಿಗೆ ತಿಳಿಸಿದ್ದಾರೆ.
ಈ ವೇಳೆ, ʼ35,000 ಜನರಿಗೆ ಹಣ ಬೇಕಿಲ್ಲ, ನಾನು ಬೇಕಾಗಿದ್ದೇನೆʼ ಎಂದು ನೀಲಣ್ಣವರ್ ಹೇಳಿದ್ದು, ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ʼಅಮಾಯಕರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ. ಅವರ ರಕ್ಷಣೆ ಮಾಡಬೇಕಿದೆʼ ಎಂದು ತಿಳಿಸಿದ್ದಾರೆ.
ʼನೀವು ಜನರಿಗೆ ಬೇಕಾಗಿರಬಹುದು, ಒಳ್ಳೆಯದು ಮಾಡಿರಬಹುದು ಅದು ನನಗೆ ಗೊತ್ತಿಲ್ಲ. ಆದರೆ ಅಮಾಯಕ ಜನರಿದ್ದಾರೆ, ಅವರನ್ನ ರಕ್ಷಣೆ ಮಾಡೋದು ಸರ್ಕಾರದ ಜವಾಬ್ದಾರಿ. ಸಾಕಷ್ಟು ಜನ ಹಣ ತಗೊಂಡು ಓಡಿ ಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ. ಕಾನೂನಿನ ಅಡಿಯಲ್ಲಿ ನೀವೇನು ಮಾಡಿದ್ದೀರಿ ಅದು ಉಳಿಯುತ್ತದೆ” ಎಂದು ತಿಳಿಸಿರುವ ನ್ಯಾಯಾಧೀಶರು, ಧರ್ಮೋ ರಕ್ಷತಿ ರಕ್ಷಿತಃ ಎಂಬ ಉದಾಹರಣೆ ಕೂಡ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ: ಒಕ್ಕೂಟ, ನಾಡ ಆಳಿಕೆಗಳ ಇಬ್ಬಗೆಯ ನೀತಿಗೆ ಹಾದಿ ತಪ್ಪಿದ ಗ್ರಾಮ ಸ್ವರಾಜ್ಯ
ಆರೋಪಿಯನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿರುವ ನ್ಯಾಯಾಲಯ, ಭದ್ರತೆ ಸೇರಿ ಆರೋಪಿ ಬಗ್ಗೆ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೋರ್ಟ್ ಹಾಲ್ನಿಂದ ಹೊರ ಬರುತ್ತಿದ್ದಂತೆ ಸಹೋದರನ ಕಂಡು ಆರೋಪಿ ಶಿವಾನಂದ ನೀಲಣ್ಣವರ್ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ.





