ಜಾರ್ಖಂಡ್‌ನ ಬಹುತೇಕ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನದ ಕೊರತೆ ಇರುವುದರಿಂದ, ಗರ್ವಾ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ದುರ್ಗಮ ಗ್ರಾಮಗಳಲ್ಲಿ ಜನಗಣತಿ ಕರ್ತವ್ಯ ನಿರ್ವಹಿಸಲು ಬೈಕ್ ಬಿಟ್ಟು ತಮ್ಮ ಕುಟುಂಬದ ಹಳೆಯ ಕುದುರೆಯನ್ನು ಆಯ್ಕೆ ಮಾಡಿಕೊಂಡು ವೈರಲ್ ಆಗಿದ್ದಾರೆ. ಇತ್ತೀಚೆಗೆ ತಮ್ಮ ಪ್ರದೇಶದಲ್ಲಿ ಪೆಟ್ರೋಲ್ ಸುಲಭವಾಗಿ ಸಿಗದೆ ಇರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.
ಗರ್ವಾ ಜಿಲ್ಲೆಯ ಧುರ್ಕಿ ತಾಲೂಕಿನ ತಾತಿಡಿರಿ ಗ್ರಾಮದ ಉತ್ಕ್ರಮಿತ್ ಸರ್ಕಾರಿ ಪ್ರೌಢಶಾಲೆಯ ಸಹಾಯಕ ಶಿಕ್ಷಕ, 43 ವರ್ಷದ ಮುನ್ನಾ ಪ್ರಸಾದ್ ಗುಪ್ತಾ, ಪೆಟ್ರೋಲ್ ಸಿಗದೆ ಕಷ್ಟಪಡುತ್ತಿದ್ದ ಕಾರಣ ಜನಗಣತಿಯ ಮನೆ ಪಟ್ಟಿ (ಹೌಸ್-ಲಿಸ್ಟಿಂಗ್) ಮತ್ತು ನಕ್ಷೆ ತಯಾರಿಸುವುದಕ್ಕಾಗಿ ಕುದುರೆಯ ಮೇಲೆ ಪ್ರಯಾಣಿಸಲು ಶುರು ಮಾಡಿದ್ದಾರೆ. “ಪೆಟ್ರೋಲ್ ಸುಲಭವಾಗಿ ಸಿಗುತ್ತಿರಲಿಲ್ಲ ಮತ್ತು ಉದ್ದದ ಸಾಲುಗಳಿದ್ದವು. ಹಾಗಾಗಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವ ಬದಲು ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಿದೆ. ನಮ್ಮ ಕುಟುಂಬದಲ್ಲಿ ವರ್ಷಗಳಿಂದ ಈ ಕುದುರೆ ಇದೆ, ಹಾಗಾಗಿ ಕುದುರೆಯ ಮೇಲೆಯೇ ಹೋಗಬೇಕೆಂದು ಭಾವಿಸಿದೆ ಎಂದು ತಿಳಿಸಿದ್ದಾರೆ.
ಬಿಳಿಯ ಸಮವಸ್ತ್ರ ಮತ್ತು ಸರ್ಕಾರ ನೀಡಿದ ಜನಗಣತಿ ಟೋಪಿ ಧರಿಸಿ, ಬೆನ್ನಿನ ಮೇಲೆ ಸಮೀಕ್ಷೆಯ ಸಾಮಗ್ರಿಗಳನ್ನು ಹೊತ್ತುಕೊಂಡು ಗ್ರಾಮದ ಹಾದಿಗಳಲ್ಲಿ ಕುದುರೆ ಸವಾರಿ ಮಾಡುವ ಗುಪ್ತಾ ಅವರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ವಾಹನ ಚಲಾಯಿಸಲು ಅಸಾಧ್ಯವಾದ ಸಣ್ಣ ಮಣ್ಣಿನ ರಸ್ತೆಗಳಿರುವಲ್ಲಿಯೂ ಕುದುರೆಯಿಂದ ತುಂಬಾ ಅನುಕೂಲವಾಗುತ್ತಿದೆ. ಅಂತಹ ಜಾಗಗಳಲ್ಲಿಯೂ ಮನೆ ಮನೆಗೆ ಕುದುರೆಯ ಮೇಲೆಯೇ ಹೋಗಿ, ಪ್ರತಿ ಮನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಅಸಹಿಷ್ಣುಗಳ ಬಾಯಿ ಮುಚ್ಚಿಸಿದ ಕಲಾಭಿವ್ಯಕ್ತಿ: ಝಾರ್ಖಂಡ್‌ನಲ್ಲಿ ಪ್ರೇಕ್ಷಕರ ಮನ ಸೂರೆಗೊಂಡ ‘ಸೆರಂಗ್’ ಸಿನೆಮಾ
ಗುಪ್ತಾ ಅವರ ಕುಟುಂಬ ಪರಂಪರೆಯಾಗಿ ಕುದುರೆಗಳನ್ನು ಬಳಸುತ್ತಿದೆ ಮತ್ತು ಅವರು ತಮ್ಮ ತಂದೆಯಿಂದ ಬಾಲ್ಯದಲ್ಲಿಯೇ ಸವಾರಿ ಕಲಿತಿದ್ದರು. 2018 ಅಥವಾ 2019ರ ನಂತರ ಹುಟ್ಟಿದ ಮಕ್ಕಳು ಕುದುರೆಯನ್ನು ಕೇವಲ ಚಿತ್ರಗಳಲ್ಲಿ ಮಾತ್ರ ನೋಡಿದ್ದಾರೆ, ಅವರು ಪ್ರಾಣಿಯನ್ನು ಪ್ರತ್ಯಕ್ಷವಾಗಿ ನೋಡಿ ಉತ್ಸಾಹಗೊಂಡರು ಎಂದು ಅವರು ಹೇಳಿದ್ದಾರೆ. ನವೆಂಬರ್ 25, 2003 ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗುಪ್ತಾ ಅವರಿಗೆ, ಇದು ಮೊದಲ ಜನಗಣತಿಯ ಕರ್ತವ್ಯ. ಶನಿವಾರ ಶಾಲೆಯ ರಜೆ ಇದ್ದರೂ ಸಹ, ಇದು ಪ್ರಮುಖ ಸರ್ಕಾರಿ ಜವಾಬ್ದಾರಿ ಎಂದು ಅವರು ತಮ್ಮ ಕಾರ್ಯ ಶುರು ಮಾಡಿದ್ದಾರೆ.
ಈ ಪ್ರಕ್ರಿಯೆ ಸುಮಾರು ಒಂದು ತಿಂಗಳ ಕಾಲ ನಡೆಯಲಿದ್ದು, ದಿನಕ್ಕೆ 5 ರಿಂದ 20 ಮನೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಜಾರ್ಖಂಡ್ ರಾಜ್ಯವು ‘ಸೆನ್ಸಸ್ 2027’ ರ ಮೊದಲ ಹಂತವಾದ “ಹೌಸ್ ಲಿಸ್ಟಿಂಗ್ ಮತ್ತು ಹೌಸಿಂಗ್ ಸೆನ್ಸಸ್” ಅನ್ನು ಮೇ 16 ರಿಂದ ಪ್ರಾರಂಭಿಸಿದೆ, ಇದು ಜೂನ್ 14 ರವರೆಗೂ ನಡೆಯಲಿದೆ. ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ಆಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.





