ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಜಮಖಂಡಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ 10 ವರ್ಷದ ಬಾಲಕನ ಮೇಲೆ ವೇಗವಾಗಿ ಬಂದ ಕಾರು ಹಾಯ್ದು, ಸ್ಥಳದಲ್ಲೇ ಸಾವಿಗೆ ಕಾರಣವಾದ ದಾರುಣ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನನ್ನು ಅಗಸ್ಯ ವಿಜಯಕುಮಾರ ಕಣಮಡಿ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಬಾಲಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹತ್ತಿರದಿಂದ ಬಂದಿದ್ದ ಕಾರು ಹಠಾತ್ ನಿಯಂತ್ರಣ ತಪ್ಪಿ ಬಾಲಕನ ಮೇಲೆ ಹರಿದಿದೆ. ಪರಿಣಾಮವಾಗಿ ತೀವ್ರ ಗಾಯಗೊಂಡ ಬಾಲಕನು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ, ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ, ಅಪಘಾತ ಉಂಟುಮಾಡಿದ ಕಾರು ಹಾಗೂ ಚಾಲಕನ ಬಗ್ಗೆ ಮಾಹಿತಿ ಲಭಿಸಿದೆ. ಕಾರು ಚಾಲಕನನ್ನು ಅಥಣಿಯ ರಾಹುಲ ಸುರೇಂದ್ರ ಹುಂಡೇಕರ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.