ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಯಮಕನಮರಡಿ ಪೊಲೀಸ್ ಠಾಣೆ ಸಿಪಿಐ ಜಾವೀದ್ ಮುಷಾಪುರಿ, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
2025ರಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಿದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗೆ ₹5 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು.
ಈ ವರ್ಷ ಗಣೇಶೋತ್ಸವದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಕೆ ಮಾಡದೆ, ಸಾಂಪ್ರದಾಯಿಕ ವಾದ್ಯಗಳನ್ನು ಬಳಸಬೇಕು. ಪರಿಸರ ಮಾಲಿನ್ಯ ನಿಯಂತ್ರಣದ ಜೊತೆಗೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಇದೇ ವೇಳೆ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಯಮಕನಮರಡಿ ಮತಕ್ಷೇತ್ರದ ವಿದ್ಯಾರ್ಥಿಗಳಿಗೆ ₹1 ಲಕ್ಷ ನಗದು ಬಹುಮಾನ ನೀಡುವುದಾಗಿ ಜಾವೀದ್ ಮುಷಾಪುರಿ ಘೋಷಿಸಿದರು.
ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಿ ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.




