ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೊಬ್ಬರದ ಕೊರತೆಯಿಂದ ಹತಾಶರಾಗಿರುವ ರೈತರು ಮಂಗಳವಾರ ಸವದತ್ತಿ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಕಚೇರಿ ಎದುರು ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿದರು.
ರೈತರು ಆರೋಪಿಸಿದಂತೆ, ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು, ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ರೈತರಿಗೆ ಲಿಂಕ್ ಗೊಬ್ಬರ ಒತ್ತಾಯಪೂರ್ವಕವಾಗಿ ನೀಡಲಾಗುತ್ತಿದೆ. ಆದರೆ, ಲಿಂಕ್ ಕಡ್ಡಾಯವಿಲ್ಲದ ಖಾಸಗಿ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತೀಯ ಕಿಸಾನ ಸಂಘದ ಪ್ರಾಂತ ಸದಸ್ಯ ಶಿವಾನಂದ ಸರದಾರ ಮಾತನಾಡಿ, “ಕೃಷಿ ಅಧಿಕಾರಿ ಎಸ್.ವಿ. ಪಾಟೀಲ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹಾಗೂ ಗೊಬ್ಬರ ಕಂಪನಿಗಳ ಹೊಂದಾಣಿಕೆಯಿಂದ ರೈತರು ಶೋಷಿತರಾಗುತ್ತಿದ್ದಾರೆ” ಎಂದು ಹೇಳಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಸಂಪಗಾಂವಿ ಅವರು, “ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರಲ್ಲಿ ಗೋವಿನಜೋಳ ಬಿತ್ತನೆ ಆಗಿದ್ದು, ಅಗತ್ಯ ಗೊಬ್ಬರ ಲಭ್ಯವಿಲ್ಲ. ಟಿಎಪಿಸಿಎಂಎಸ್, ಪಿಕೆಪಿಎಸ್ ಮತ್ತು ಖಾಸಗಿ ಕೇಂದ್ರಗಳಲ್ಲಿ ಗೊಬ್ಬರ ಪೂರೈಕೆಯಿಲ್ಲ” ಎಂದು ಆರೋಪಿಸಿದರು.
ಯೂರಿಯಾ, ಡಿಎಪಿ, ಪೊಟ್ಯಾಶ್ ಹಾಗೂ ಕೀಟನಾಶಕಗಳ ಅಭಾವ, ನ್ಯಾನೋ ಗೊಬ್ಬರದ ಬಲವಂತದ ವಿತರಣೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಗೊಬ್ಬರ ಲಭ್ಯವಿಲ್ಲದ ಕಾರಣದಿಂದ ಬೆಳೆ ನಾಶವಾಗುತ್ತಿದೆ ಎಂದು ರೈತರು ತಿಳಿಸಿದರು.
ಪ್ರತಿಭಟನೆಯಲ್ಲಿ ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಬಿಜೂರ, ಸುರೇಶ ಅಂಗಡಿ, ಮಲ್ಲಪ್ಪ ಹುಂಡನವರ, ಕಲ್ಲನಗೌಡ ಪಾಟೀಲ, ಅಪ್ಪಾಸಾಬ ಹಲೀಮನವರ, ಶೋಭಾ ಪಾಟೀಲ, ಮಾಲಾ ಗುರವನ್ನವರ, ಅಖಿಲಾ ತಿವಾರಿ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.