ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಬೃಹತ್ ಪ್ರತಿಮೆಯ ಬಲಗೈ ಖಡ್ಗ ಸಮೇತ ಸೋಮವಾರ ಸಂಜೆ ತುಂಡಾಗಿ ಬಿದ್ದಿದೆ.
ಅಕ್ಟೋಬರ್ 23, 24 ಮತ್ತು 25ರಂದು ರಾಜ್ಯಮಟ್ಟದ ಕಿತ್ತೂರು ಉತ್ಸವ ನಡೆಯಲಿದ್ದು, ಉತ್ಸವದ ಸಿದ್ಧತೆಗಳ ನಡುವೆಯೇ ಐತಿಹಾಸಿಕ ಪ್ರತಿಮೆಗೆ ಹಾನಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೋಮವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಘಟನೆ ಸಂಭವಿಸಿದೆ. ಪ್ರತಿಮೆಯ ಬಲಗೈ ಖಡ್ಗ ಸಮೇತ ತುಂಡಾಗಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ತಹಶೀಲ್ದಾರ್, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಕಂಚಿನ ಪ್ರತಿಮೆ ಭಗ್ನಗೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಮಳೆನೀರಿನಿಂದ ಪ್ರತಿಮೆಯ ಜೋಡಣೆಯ ಭಾಗ ದುರ್ಬಲಗೊಂಡು ಬಲಗೈ ಮುರಿದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ತಾಂತ್ರಿಕ ಪರಿಶೀಲನೆಯ ಬಳಿಕವಷ್ಟೇ ನಿಖರ ಕಾರಣ ತಿಳಿಯಬೇಕಿದೆ.
1997ರಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಪ್ರತಿಮೆಯನ್ನು ಹಿಂದಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರತಿಮೆಯ ಬಣ್ಣ ಮಾಸಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಮರುಬಣ್ಣ ಬಳಿಯಲಾಗಿತ್ತು.
ನೆಲದಿಂದ ಪ್ರತಿಮೆಯ ಒಟ್ಟು ಎತ್ತರ ಸುಮಾರು 50 ಅಡಿಗಳಷ್ಟಿದೆ. ಕುದುರೆಯ ಮೇಲೆ ಕುಳಿತಿರುವ ರಾಣಿ ಚನ್ನಮ್ಮ ಅವರ ಪ್ರತಿಮೆ 10 ಅಡಿ ಎತ್ತರವಿದ್ದು, ಅದರ ಕೆಳಗಿನ ಪೀಠ 18 ಅಡಿ ಎತ್ತರವಿದೆ. ಪ್ರತಿಮೆಯ ಒಟ್ಟು ತೂಕ ಒಂದು ಟನ್ ಎಂದು ತಿಳಿದುಬಂದಿದೆ.
ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ವೀರರಾಣಿ ಚನ್ನಮ್ಮ ಅವರ ಪ್ರತಿಮೆಗೆ ಹಾನಿಯಾಗಿರುವುದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ. ಪ್ರತಿಮೆಯ ಹಾನಿಗೆ ಕಾರಣ ಪತ್ತೆಹಚ್ಚಿ, ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.




