ಎಸ್‌ಐಆರ್ ವಿವಾದದ ಚರ್ಚೆಗಳಲ್ಲಿ ಎರಡು ವಾದಗಳಿವೆ; ಒಂದು – ಮತಪಟ್ಟಿಯಿಂದ 13.3 ಕೋಟಿ ಮತದಾರರ ಹೆಸರು ಕೈಬಿಟ್ಟು, ಅವರನ್ನು ಹಕ್ಕಿನಿಂದ ವಂಚಿಸಲಾಗಿದೆ ಎಂದು ವಿಮರ್ಶಕರು ದೂರುತ್ತಾರೆ. ಎರಡು. ಆ ಹೆಸರುಗಳು ಗೈರುಹಾಜರಿ, ವಲಸೆ, ಮರಣ ಅಥವಾ ನಕಲಿ (ASDD) ಕಾರಣಗಳಿಂದಾಗಿ ಅಳಿಸಲ್ಪಟ್ಟಿವೆ ಎಂದು ಚುನಾವಣಾ ಆಯೋಗ ಮತ್ತು ಸರ್ಕಾರದ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಆಡಳಿತಾತ್ಮಕ ದೋಷಗಳನ್ನು ಪತ್ತೆಹಚ್ಚಲು ಎಸ್‌ಐಆರ್ ನಂತರದ ಅಂತಿಮ ಮತಪಟ್ಟಿಯ ಪ್ರಮಾಣವನ್ನು ದೇಶದ ಒಟ್ಟು ವಯಸ್ಕ (ಮತದಾನಕ್ಕೆ ಅರ್ಹ) ಜನಸಂಖ್ಯೆಯ ಅಧಿಕೃತ ಅಂದಾಜಿನೊಂದಿಗೆ ಹೋಲಿಸಿ ನೋಡಬೇಕು. ಹೋಲಿಕೆಯಲ್ಲಿ ಬರೋಬ್ಬರಿ 14 ಕೋಟಿ ಜನರು ಮತಪಟ್ಟಿಯಿಂದ ಕಾಣೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಚಿಂತಕ ಯೋಗೇಂದ್ರ ಯಾದವ್ ಮತ್ತು ಪ್ರಾಧ್ಯಾಪಕ ಜೀನ್ ಡ್ರೇಜ್ ಹೇಳಿದ್ದಾರೆ.
ಸುರ್ಜಿತ್ ಭಲ್ಲಾ ಅವರು ಇತ್ತೀಚೆಗೆ ಎಸ್‌ಐಆರ್‌ಅನ್ನು ಸಮರ್ಥಿಸಿ ಬರೆದ ಲೇಖನವನ್ನು ವಿಮರ್ಶಿಸಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಈ ಇಬ್ಬರೂ ಜಂಟಿಯಾಗಿ ಲೇಖನ ಬರೆದಿದ್ದಾರೆ. ಅದರಲ್ಲಿ, ಎಸ್‌ಐಆರ್‌ನಿಂದ ವಂಚನೆಗೊಳಗಾಗಿರುವ ಭಾರತೀಯರ ಅಂಕಿಅಂಶಗಳನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. ಈ ಇಬ್ಬರೂ ಲೇಖಕರು ಪ್ರತಿಪಾದಿಸಿರುವ, ‘ಎಸ್‌ಐಆರ್ ನಂತರದ ಅಂತಿಮ ಮತಪಟ್ಟಿಯ ಪ್ರಮಾಣವನ್ನು ದೇಶದ ಒಟ್ಟು ವಯಸ್ಕ ಜನಸಂಖ್ಯೆಯ ಅಧಿಕೃತ ಅಂದಾಜಿನೊಂದಿಗೆ ಹೋಲಿಸುವ’ ವಿಧಾನವನ್ನು ಸ್ವತಃ
ಚುನಾವಣಾ ಆಯೋಗವೇ ಸಾಂಪ್ರದಾಯಿಕವಾಗಿ ತನ್ನ ಪಟ್ಟಿಯ ನಿಖರತೆಯನ್ನು ಅಳೆಯಲು ಮಾನದಂಡವಾಗಿ ಬಳಸುತ್ತದೆ ಎಂದು ಅವರು ಹೇಳಿದ್ದಾರೆ.
“ಪ್ರಸ್ತುತ ಎಸ್‌ಐಆರ್‌ನ ಮೊದಲ ಮತ್ತು ಎರಡನೇ ಹಂತಗಳಿಗೆ ಒಳಪಟ್ಟ 9 ಪ್ರಮುಖ ರಾಜ್ಯಗಳ ದತ್ತಾಂಶಗಳನ್ನು ‘ತಾಂತ್ರಿಕ ಜನಸಂಖ್ಯಾ ಅಂದಾಜು ಗುಂಪಿ’ನ 2026ರ ವಯಸ್ಕ ಜನಸಂಖ್ಯೆಯ ವರದಿಯೊಂದಿಗೆ ಹೋಲಿಸಿದಾಗ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಈ ಒಂಬತ್ತು ರಾಜ್ಯಗಳಲ್ಲಿ ಒಟ್ಟು ವಯಸ್ಕ ಜನಸಂಖ್ಯೆಗಿಂತ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಸಂಖ್ಯೆ ಬರೋಬ್ಬರಿ 7 ಕೋಟಿಗಿಂತಲೂ ಕಡಿಮೆಯಿದೆ. ಅಂದರೆ, ಈ ರಾಜ್ಯಗಳ ಒಟ್ಟು ವಯಸ್ಕ ಜನಸಂಖ್ಯೆಯ 12%ರಷ್ಟು ಜನರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ” ಎಂದು ಲೇಖಕರು ವಿವರಿಸಿದ್ದಾರೆ.
“ಮತಪಟ್ಟಿಯಿಂದ ಹೊರಗುಳಿದ ಈ 12% ಮತದಾರರ ಪೈಕಿ, ಉತ್ತರ ಪ್ರದೇಶ ಒಂದರಲ್ಲೇ 2.8 ಕೋಟಿ ವಯಸ್ಕರು ಹೊರಗುಳಿದಿದ್ದಾರೆ. ಇದು ಆ ರಾಜ್ಯದ ಒಟ್ಟು ವಯಸ್ಕ ಜನಸಂಖ್ಯೆಯ 17%ಕ್ಕಿಂತಲೂ ಅಧಿಕವಾಗಿದೆ. ಇನ್ನು, ಮತಪಟ್ಟಿಯಿಂದ ಹೊರಹಾಕಲಾದ 12%ರಷ್ಟು ಸರಾಸರಿ ಪ್ರಮಾಣವನ್ನು ದೇಶಾದ್ಯಂತ ಅನ್ವಯಿಸಿದರೆ, ಅಂತಿಮವಾಗಿ ಪಟ್ಟಿಯಿಂದ ಹೊರಗುಳಿದ ‘ಕಾಣೆಯಾದ ಮತದಾರರ’ ಸಂಖ್ಯೆ ಸುಮಾರು 12 ಕೋಟಿಗೆ ತಲುಪುತ್ತದೆ” ಎಂದು ವಿವರಿಸಿದ್ದಾರೆ.
ಇನ್ನು, “ಮೂರನೇ ಹಂತದ ಎಸ್‌ಐಆರ್ ಪ್ರಕ್ರಿಯೆಯ ಪ್ರವೃತ್ತಿಗಳನ್ನು ಗಮನಿಸಿದರೆ, ನೈಜ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳ ಕರಡು ಪಟ್ಟಿಗಳು ಬಿಡುಗಡೆಯಾಗಿದ್ದು, ಕರಡು ಹಂತದಲ್ಲೇ ಹೊರಗಿಡುವಿಕೆಯ ಪ್ರಮಾಣ ತೀವ್ರವಾಗಿದೆ. ರಾಹುಲ್ ಶಾಸ್ತ್ರಿ ಅವರ ಅಂದಾಜಿನ ಪ್ರಕಾರ, ಇಡೀ ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಾಗ ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿಯುವವರ ಸಂಖ್ಯೆ ಕೇವಲ 87.8 ಕೋಟಿ ಮಾತ್ರ. ಭಾರತದ ಪ್ರಸ್ತುತ ಒಟ್ಟು ವಯಸ್ಕ ಜನಸಂಖ್ಯೆ ಸುಮಾರು 101.6 ಕೋಟಿ ಎಂಬುದನ್ನು ಪರಿಗಣಿಸಿದರೆ, ಬರೋಬ್ಬರಿ 14 ಕೋಟಿ ‘ಕಾಣೆಯಾದ ಮತದಾರರು’ ಉಳಿಯುತ್ತಾರೆ” ಎಂದು ತಿಳಿಸಿದ್ದಾರೆ.

“ಈ 14 ಕೋಟಿ ಜನರಲ್ಲಿ ಅರ್ಹರಾಗಿದ್ದರೂ ಹಳೆಯ ಪಟ್ಟಿಯಿಂದ ಅಕ್ರಮವಾಗಿ ಅಳಿಸಲ್ಪಟ್ಟವರು ಮತ್ತು ಹೊಸದಾಗಿ ಸೇರ್ಪಡೆಯಾಗಬೇಕಿದ್ದರೂ ಅವಕಾಶ ಸಿಗದ ಕ್ಯೋಟ್ಯಂತರ ನಾಗರಿಕರು ಸೇರಿದ್ದಾರೆ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್ ಏನು ಹೇಳುತ್ತಾರೆ?
“ಭಾರತೀಯ ಸನ್ನಿವೇಶದಲ್ಲಿ ಮತದಾರರ ಗುರುತಿನ ಚೀಟಿ ಎಂಬುದು ಕೇವಲ ಮತದಾನಕ್ಕಷ್ಟೇ ಅಲ್ಲದೆ, ಪ್ರತಿಯೊಂದು ಸರ್ಕಾರಿ ಸೇವೆ ಮತ್ತು ಸೌಲಭ್ಯಕ್ಕೂ ಅತ್ಯಗತ್ಯವಾದ ದಾಖಲೆ. ಆದ್ದರಿಂದ, ನಾಗರಿಕರು ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳುವುದಿಲ್ಲ ಎಂಬ ವಾದ ನಂಬಲರ್ಹವಲ್ಲ. ಭಾರತದಲ್ಲಿ ಮತದಾರರ ನೋಂದಣಿಯು ಸರ್ಕಾರದ ಉಪಕ್ರಮವೇ ಆಗಿರುವುದರಿಂದ, ವಯಸ್ಕರು ಪಟ್ಟಿಯಿಂದ ಹೊರಗುಳಿಯುವುದು ಆಡಳಿತ ಯಂತ್ರ ಮತ್ತು ಚುನಾವಣಾ ಆಯೋಗದ ವೈಫಲ್ಯವೇ ಹೊರತು ಸ್ವೀಕರಿಸಬಹುದಾದ ಕೊರತೆಯಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ಒಂದು ವೇಳೆ ಸುರ್ಜಿತ್ ಭಲ್ಲಾ ಅವರು ಹೇಳುವಂತೆ, 8.5%ರಷ್ಟು ಮತದಾರರು ‘ಸ್ವಯಂಪ್ರೇರಿತ ಹೊರಗುಳಿದಿದ್ದಾರೆ’ ಎಂಬ ಮಾನದಂಡವನ್ನು ಒಪ್ಪಿಕೊಂಡರೂ ಸಹ, ಉತ್ತರ ಪ್ರದೇಶ ಒಂದರಲ್ಲೇ 1.4 ಕೋಟಿ ಜನರು ಅನಗತ್ಯವಾಗಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ತಾವೇ ಸ್ವತಃ ತಮ್ಮ ಮತವು ಪಟ್ಟಿಯಿಂದ ಕೈಬಿಟ್ಟುಹೋಗಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದ ಭಲ್ಲಾ ಅವರಂತಹ ವಿಶ್ಲೇಷಕರು, ಕೋಟ್ಯಂತರ ದೇಶವಾಸಿಗಳ ಮತದಾನದ ಹಕ್ಕು ಕಸಿದುಕೊಳ್ಳುತ್ತಿರುವುದನ್ನು ‘ಏನೂ ಇಲ್ಲದ ವಿಷಯಕ್ಕೆ ದೊಡ್ಡ ಗದ್ದಲ’ಎಂದು ತಳ್ಳಿಹಾಕುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಎಸಗುವ ಅಪಚಾರವಾಗಿದೆ” ಎಂದಿದ್ದಾರೆ.




