ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಯರಗಟ್ಟಿ ಹಾಗೂ ಸವದತ್ತಿ ತಾಲ್ಲೂಕುಗಳಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಮೂರು ತಾಸಿಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ಹಲವು ಮರಗಳು, ವಿದ್ಯುತ್ ಕಂಬಗಳು ಉರುಳಿದ್ದು, ರಸ್ತೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಬೈಕುಗಳು, ಆಟೊಗಳು, ಟ್ರ್ಯಾಕ್ಟರ್‌ಗಳು ಹಾಗೂ ಕಾರುಗಳು ನೀರಿನಲ್ಲಿ ತೇಲಿದ ದೃಶ್ಯಗಳು ಜನರನ್ನು ಆತಂಕಕ್ಕೀಡು ಮಾಡಿವೆ.
ಬೈಲಹೊಂಗಲ ಪಟ್ಟಣದಲ್ಲಿ ಈ ವರ್ಷದ ಮೊದಲ ಮಳೆಯೇ ರುದ್ರಾವತಾರ ತಾಳಿತು. ಸಂಜೆ ಏಕಾಏಕಿ ಗುಡುಗು-ಸಿಡಿಲಿನೊಂದಿಗೆ ಆರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಬಿರುಸು ಪಡೆದು ಪಟ್ಟಣವನ್ನು ಜಲಾವೃತಗೊಳಿಸಿತು. ಬಸ್ ನಿಲ್ದಾಣದ ಚರಂಡಿಗಳು ತುಂಬಿ ಹರಿದ ಪರಿಣಾಮ ಸುಮಾರು ಮೂರು ಅಡಿ ಎತ್ತರದ ನೀರು 80 ಅಡಿ ಅಗಲದ ರಸ್ತೆಯ ಮೇಲೆ ಹರಿಯಿತು. ಮಳೆಯ ನೀರಿನ ರಭಸಕ್ಕೆ ಸಂಚರಿಸುತ್ತಿದ್ದ ಟ್ರ್ಯಾಕ್ಟರ್‌ವೊಂದು ಹಿಂದಕ್ಕೆ ಜರಿದು ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆಯಿತು.
ಇಂಚಲ ರಸ್ತೆ, ಆನೆ ಅಗಸಿ ಸೇರಿದಂತೆ ಹಲವೆಡೆ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕುಗಳು ಮತ್ತು ಆಟೊಗಳು ನೀರಿನಲ್ಲಿ ತೇಲಿಹೋಗಿದ್ದವು. ವಾಹನಗಳ ಮಾಲೀಕರು ಓಡಿ ಬಂದು ಅವುಗಳನ್ನು ರಕ್ಷಿಸಲು ಹರಸಾಹಸಪಟ್ಟರು. ನ್ಯಾಯಾಲಯದ ಸಮೀಪ ಬೃಹತ್ ಮರ ರಸ್ತೆ ಮೇಲೆ ಉರುಳಿಬಿದ್ದ ಪರಿಣಾಮ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಕಿರಿದಾದ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದು ನೂರಾರು ಮನೆಗಳಿಗೆ ನುಗ್ಗಿ ನಿವಾಸಿಗಳನ್ನು ಸಂಕಷ್ಟಕ್ಕೆ ದೂಡಿತು.
ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಸುರಿದ ರಭಸದ ಮಳೆಯಿಂದ ಸೋಮವಾರದ ಸಂತೆ ಅಸ್ತವ್ಯಸ್ತಗೊಂಡಿತು. ವ್ಯಾಪಾರಕ್ಕಾಗಿ ತರಲಾಗಿದ್ದ ತರಕಾರಿ, ದಿನಸಿ ಸೇರಿದಂತೆ ವಿವಿಧ ವಸ್ತುಗಳು ನೀರುಪಾಲಾದವು. ಮಳೆಯ ಅಬ್ಬರಕ್ಕೆ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂತೆ ಅರ್ಧದಲ್ಲೇ ಸ್ಥಗಿತಗೊಂಡಿತು.
ಸವದತ್ತಿ ಪಟ್ಟಣದಲ್ಲೂ ರಸ್ತೆಗಳ ಮೇಲೆ ಸುಮಾರು ಎರಡು ಅಡಿ ಎತ್ತರದ ನೀರು ಹರಿಯಿತು. ರಸ್ತೆ ಕಿರಿದಾಗಿರುವುದರಿಂದ ನೀರು ವೇಗವಾಗಿ ಹರಿದು ಜನರ ಓಡಾಟಕ್ಕೆ ತೊಂದರೆ ಉಂಟಾಯಿತು. ಪ್ರಯಾಣಿಕರಿದ್ದ ಮೂರು ಟಂಟಂ ವಾಹನಗಳು ನೀರಿನ ರಭಸಕ್ಕೆ ಸಿಲುಕಿ ಹಿಂದಕ್ಕೆ ಜರಿದು ಹೋದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.




