ಇತ್ತೀಚಿನ ವಿಧಾನಸಭಾ ಚುನಾವಣೆಯ ಹಿನ್ನಡೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಮಮತಾ ಬ್ಯಾನರ್ಜಿ ಬಣ ಹಾಗೂ ಬಂಡಾಯ ನಾಯಕರ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಬಂಡಾಯ ಬಣವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಪಕ್ಷದ ನಿಷ್ಠಾವಂತ ನಾಯಕ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ, ಬಂಡಾಯಗಾರರನ್ನು ‘ದ್ರೋಹಿಗಳು’ (ಗದ್ದಾರ್) ಹಾಗೂ ‘ಅಧಿಕಾರದ ದಾಹವುಳ್ಳವರು’ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಬಂಡಾಯ ಬಣದ ಬಳಿ ಅಗತ್ಯ ಸಂಖ್ಯಾಬಲವಿಲ್ಲ ಎಂದು ಅವರು ಹೇಳಿದ್ದಾರೆ. ನೇರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, “ನಿಮ್ಮ (ಬಿಜೆಪಿ) ಬಳಿ ಮುಖ್ಯಮಂತ್ರಿ, ಇಡಿ, ಸಿಬಿಐ ಹಾಗೂ ಇತರ ಅಧಿಕಾರಗಳಿರಬಹುದು. ಆದರೆ, ನನ್ನ ಬಳಿ ‘ಮಾ, ಮಾಟಿ, ಮಾನುಷ್’ (ತಾಯಿ, ತಾಯ್ನಾಡು, ಜನತೆ) ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ” ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮತ್ತೋರ್ವ ಟಿಎಂಸಿ ಸಂಸದ ಕೀರ್ತಿ ಆಜಾದ್, ಬಂಡಾಯ ನಾಯಕರ ರಾಜಕೀಯ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಧೈರ್ಯ ಮತ್ತು ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಮರು ಆಯ್ಕೆ ಬಯಸುವಂತೆ ಅವರು ಸವಾಲು ಹಾಕಿದ್ದಾರೆ. ಚುನಾವಣೆ ಮುಗಿದ ಬಳಿಕವಷ್ಟೇ ಈ ಸಮಸ್ಯೆಗಳನ್ನು ಏಕೆ ಪ್ರಸ್ತಾಪಿಸಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ ಪಕ್ಷದ ವಿರುದ್ಧ ಆರೋಪ ಮಾಡಿ ರಾಜೀನಾಮೆ ನೀಡಿದ ಸುಖೇಂದು ಶೇಖರ್ ರಾಯ್ ಅವರ ನಡೆಯನ್ನು ಉಲ್ಲೇಖಿಸುತ್ತಾ, ಕನಿಷ್ಠ ಪಕ್ಷ ಅವರು ರಾಜಕೀಯ ನೈತಿಕತೆಯನ್ನಾದರೂ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಫ್ರೆಂಚ್ ಓಪನ್ ಟೆನಿಸ್: ಅಲೆಕ್ಸಾಂಡರ್ ಜ಼್ವೆರೇವ್‌ಗೆ ಚೊಚ್ಚಲ ಗ್ರಾನ್‌ಸ್ಲಾಮ್ ಕಿರೀಟ
ಮಮತಾ ಬಣದ ಈ ತೀಕ್ಷ್ಣ ವಾಗ್ದಾಳಿಗೆ ಬಂಡಾಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ. “ನನ್ನ ತಲೆ ಹೋದರೂ ಸರಿ, ನಾನು ಯಾರಿಗೂ ತಲೆ ಬಾಗುವುದಿಲ್ಲ (ಮೇರಾ ಸರ್ ಕಟೇಗಾ ಲೇಕಿನ್ ಝುಕೇಗಾ ನಹೀಂ). ನಾನು ಬಹಳಷ್ಟನ್ನು ಸಹಿಸಿಕೊಂಡಿದ್ದೇನೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ನಂತರ ನಾನು ಇಲ್ಲಿಗೆ ಬಂದಿಲ್ಲ, ಕಳೆದ 40 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿರುವ ಕಾಕೋಲಿ, ತಮ್ಮ ಈ ನಿರ್ಧಾರವು ಕೇವಲ ಪಕ್ಷದ ರಾಜಕೀಯವಲ್ಲ, ಇದು ಬಂಗಾಳ ಹಾಗೂ ದೇಶದ ಭದ್ರತೆಯ ಹಿತದೃಷ್ಟಿಯಿಂದ ಕೈಗೊಂಡಿರುವ ಹೆಜ್ಜೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.





