ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಬೈಕ್ ವೇಗವಾಗಿ ಚಲಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನ ಮೇಲೆ ಬಿಜೆಪಿ ಮುಖಂಡ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಯಿಂದಾಗಿ ಯುವಕನ ಕೈ ಮೂಳೆ ಮುರಿದಿದ್ದು, ಮೈತುಂಬಾ ರಕ್ತ ಹೆಪ್ಪುಗಟ್ಟುವಂತೆ ಗಂಭೀರ ಗಾಯಗಳಾಗಿವೆ. ಘಟನೆಯನ್ನು ಖಂಡಿಸಿ ನೂರಾರು ಜನರು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ್ದರಿಂದ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯಾಳು ಯುವಕನನ್ನು ಮಹಮದ್ ಜೈದ್ ಎಂದು ಗುರುತಿಸಲಾಗಿದೆ. ಜೈದ್ ತನ್ನ ತಮ್ಮನನ್ನು ಶಾಲೆಯಿಂದ ಮನೆಗೆ ಕರೆತರಲು ಸ್ಕೂಟಿಯಲ್ಲಿ ತೆರಳಿದ್ದನು. ಆದರೆ, ಶಾಲೆ ಇನ್ನು ಬಿಡದ ಕಾರಣ ಆತ ಶಾಲೆಯ ಮುಂಭಾಗ ಎರಡು-ಮೂರು ಬಾರಿ ಓಡಾಡಿದ್ದ ಎನ್ನಲಾಗಿದೆ. ಈ ವೇಳೆ “ಬೈಕನ್ನು ಯಾಕೆ ಇಷ್ಟು ಸ್ಪೀಡಾಗಿ ಓಡಿಸುತ್ತೀಯಾ?” ಎಂದು ಪ್ರಶ್ನಿಸಿದ ಸ್ಥಳೀಯ ಬಿಜೆಪಿ ಮುಖಂಡ ಸಂತೋಷ್ ಮಾಳೆ ಎಂಬಾತ, ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಕಬ್ಬಿಣದ ರಾಡ್‌ನಿಂದ ತೀವ್ರವಾಗಿ ಹೊಡೆದ ಪರಿಣಾಮ ಜೈದ್‌ನ ಕೈ ಮುರಿದಿದ್ದು, ದೇಹದ ಕೆಲವು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮುಸ್ಲಿಂ ಸಮುದಾಯದ ನೂರಾರು ಯುವಕರು ಮತ್ತು ಸಾರ್ವಜನಿಕರು ಮಧ್ಯರಾತ್ರಿವರೆಗೂ ಅಜ್ಜಂಪುರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಸಾರ್ವಜನಿಕರನ್ನು ಶಾಂತಗೊಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರಾಜ್ಯ ರೈತ ಸಂಘ ಸಮಿತಿ ಮೇರೆಗೆ ತಾಲೂಕು ಸಮಿತಿ ವಜಾ; ಡಿ. ಮಹೇಶ್
ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಸಂತೋಷ್ ಮಾಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸುತ್ತಿದ್ದಂತೆ ಆರೋಪಿ ಸಂತೋಷ್ ನಾಪತ್ತೆಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





