ಬೆಳಗಾವಿ ಜಿಲ್ಲೆಯ ರಾಮದುರ್ಗ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಚರಂಡಿ ನೀರು ನುಗ್ಗಿ ಗಬ್ಬೆದ್ದು ನಾರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಚೇರಿಯ ಮುಖ್ಯ ಗೇಟ್ ಸೇರಿದಂತೆ ಎರಡು ಪ್ರವೇಶ ದ್ವಾರಗಳ ಬಳಿ ಚರಂಡಿ ನೀರು ನಿಂತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು, ಹೇಸಿಗೆಯಿಂದ ಹೆಜ್ಜೆಯಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
“ಕಚೇರಿ ಆವರಣದ ಒಳಭಾಗದಲ್ಲೂ ಸರಿಯಾದ ಸ್ವಚ್ಛತೆ ಇಲ್ಲ. ಮುರಿದು ಬಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿಲ್ಲ, ಎಲ್ಲೆಡೆ ಕಸ ಎಸೆಯಲಾಗಿದೆ. ವ್ಯವಸ್ಥಿತ ಕಸ ನಿರ್ವಹಣೆ ನಡೆಯುತ್ತಿಲ್ಲ. ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಗಮನಕ್ಕೆ ಈ ಸಮಸ್ಯೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
“ಸರ್ಕಾರಿ ಕಚೇರಿ ಆವರಣವೇ ಹೀಗೆ ಗಬ್ಬೆದ್ದರೆ ಇನ್ನಿತರೆಡೆಗಳ ನೈರ್ಮಲ್ಯದ ಕುರಿತು ಕಲ್ಪಿಸಿಕೊಳ್ಳುವುದೇ ಅಸಹ್ಯವೆನಿಸುತ್ತದೆ” ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

“ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿರುವ ತೆರೆದ ಚರಂಡಿ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ರೋಗಗಳು ಹರಡುವ ಭೀತಿ ಎದುರಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ದಿನವಿಡೀ ಈ ದುರ್ನಾತ ಸಹಿಸುತ್ತಿರುವ ಸಿಬ್ಬಂದಿಗಳು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಸಮಸ್ಯೆ ಇಷ್ಟೊಂದು ಬಿಗಡಾಯಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದುರ್ನಾತ ತಾಳಲಾರದೆ ಕೆಲವು ಸ್ಥಳೀಯರು ಸ್ವತಃ ಚರಂಡಿಯ ಕಸ ತೆರವುಗೊಳಿಸಲು ಮುಂದಾಗಿದ್ದಾರೆ. “ಸ್ವಚ್ಛತಾ ನಿರ್ವಹಣೆಗೆ ಇಲಾಖೆಯ ಬೊಕ್ಕಸದಲ್ಲಿ ಹಣವಿಲ್ಲವೇ? ಅಥವಾ ಅಧಿಕಾರಿಗಳಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲವೇ?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಬಸವರಾಜ್, “ತಹಶೀಲ್ದಾರ್ ಕಚೇರಿಗೆ ಪ್ರತಿದಿನ ನೂರಾರು ಜನ ಬಂದು ಹೋಗುತ್ತಾರೆ. ಗೇಟ್ ಮುಂಭಾಗವೇ ಚರಂಡಿ ನೀರು ನಿಂತಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆಯಿಂದ ಅಲ್ಲೆಲ್ಲೂ ನಿಲ್ಲಲು ಆಗುತ್ತಿಲ್ಲ, ಕಚೇರಿಯೊಳಗೆ ಹೋಗುವುದೇ ದೊಡ್ಡ ಹಿಂಸೆಯಾಗಿದೆ” ಎಂದು ಹೇಳಿದರು.
ಇನ್ನೊಬ್ಬ ಸ್ಥಳೀಯ ನಿವಾಸಿ ಶಾಂತಾ ಅವರು, “ಕಚೇರಿ ಸುತ್ತಮುತ್ತಲಿನ ಅನೈರ್ಮಲ್ಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು” ಎಂದು ಮನವಿ ಮಾಡಿದ್ದಾರೆ.

ಸ್ಥಳೀಯ ಮಹಾದೇವಪ್ಪ ಸಮಸ್ಯೆಯ ಕುರಿತು ಮಾತನಾಡಿ, “ತಾಲೂಕಿನ ಪ್ರಮುಖ ಸರ್ಕಾರಿ ಕಚೇರಿಯ ಪರಿಸ್ಥಿತಿಯೇ ಹೀಗಿದ್ದರೆ ಬೇರೆ ಕಚೇರಿಗಳ ಸ್ಥಿತಿ ಹೇಗಿರಬಹುದು? ಜನರ ಆರೋಗ್ಯದ ದೃಷ್ಟಿಯಿಂದ ತಕ್ಷಣ ಚರಂಡಿ ಸ್ವಚ್ಛಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸರ್ಕಾರಿ ಕಾರಿನಲ್ಲಿ ಕುಳಿತು ಕಾಲಿಗೆ ಕೆಸರು ಮೆತ್ತದಂತೆ ಓಡಾಡುವ ಅಧಿಕಾರಿಗಳು ಕೊಂಚ ಈ ಸಮಸ್ಯೆಯ ಕಡೆ ಗಮನಹರಿಸಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



