ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಕೈದಿಯೊಂದಿಗೆ ವೀಡಿಯೋ ಕಾಲ್ ನಡೆಸಿದ ಆರೋಪ ಹಾಗೂ ಕೈದಿಗಳೊಂದಿಗೆ ಹಣಕಾಸಿನ ವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಜಯಶ್ರೀ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಜಯಶ್ರೀ ಅವರದ್ದೆನ್ನಲಾದ ಕೈದಿಯೊಂದಿಗಿನ ವೀಡಿಯೋ ಕಾಲ್ ದೃಶ್ಯಗಳು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಕೈದಿಗಳೊಂದಿಗೆ ಹಣಕಾಸಿನ ವ್ಯವಹಾರ ನಡೆಸಿದ ಆರೋಪಗಳೂ ಕೇಳಿಬಂದಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆಂತರಿಕ ತನಿಖೆ ಕೈಗೊಂಡಿತ್ತು.
ತನಿಖೆ ಪೂರ್ಣಗೊಂಡ ಬಳಿಕ ಆಂತರಿಕ ಭದ್ರತಾ ವಿಭಾಗದ ಐಜಿಪಿ ಅವರು ಇನ್ಸ್‌ಪೆಕ್ಟರ್ ಜಯಶ್ರೀ ವಿರುದ್ಧ ಇಲಾಖಾ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಿದ್ದಾರೆ.
ವೀಡಿಯೋ ಕಾಲ್ ಪ್ರಕರಣದ ಬಳಿಕ ಕೈದಿಯೊಬ್ಬನ ಕೊಲೆಗೆ ಸಂಬಂಧಿಸಿದ ಎನ್ನಲಾದ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣದ ಕುರಿತು ಇಲಾಖಾ ಮಟ್ಟದಲ್ಲಿ ನಡೆದ ತನಿಖೆಯ ಬಳಿಕ ಇದೀಗ ಇನ್ಸ್‌ಪೆಕ್ಟರ್ ವಿರುದ್ಧ ಕಠಿಣ ಕ್ರಮ ಜರುಗಿದೆ.




