ಹಳೇ ದ್ವೇಷದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಐವರು ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಅಪರಾಧಿಗಳಿಗೆ ತಲಾ 50 ಸಾವಿರ ರೂ. ದಂಡವನ್ನೂ ವಿಧಿಸಿ ಆದೇಶ ಹೊರಡಿಸಿದೆ.
ಶಿಕ್ಷೆಗೆ ಒಳಗಾದವರನ್ನು ಉದಯ ಮಾರುತಿ ಬಂಡೋಳ್ಳಿ, ಸುಭಾಷ ಫಕೀರಪ್ಪ ಸೊಲನ್ನವರ, ವಿಠಲ ಮುತ್ತೆಪ್ಪ ಮೀಶಿ, ಶಶಿಕುಮಾರ ರಮೇಶ ಈಳಿಗೇರ ಹಾಗೂ ರಮೇಶ ಬಸಪ್ಪ ಮಾಯನ್ನಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಮುಗಳಿಹಾಳ ಗ್ರಾಮದ ದಾಸನಾಳ ಕ್ರಾಸ್ ಸಮೀಪ 2022ರ ಸೆಪ್ಟೆಂಬರ್ 10ರಂದು ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅರ್ಜುನಗೌಡ ಬಸನಗೌಡ ಬಿರಾದಾರ ಪಾಟೀಲ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು.
ಈ ಸಂದರ್ಭದಲ್ಲಿ ಉದಯ ಬಂಡೋಳ್ಳಿ ಎಂಬಾತ ಚಾಕುವಿನಿಂದ ಅರ್ಜುನಗೌಡ ಅವರ ಬಲ ಎದೆಯ ಕೆಳಭಾಗಕ್ಕೆ ಇರಿದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಅರ್ಜುನಗೌಡ ಅವರನ್ನು ಯರಗಟ್ಟಿಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದರು. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಮೌನೇಶ್ವರ ಮಾಲಿಪಾಟೀಲ ಅವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಸುಭಾಷ ಸಂಕದ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿ, ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿದ್ದಾರೆ.ಜತೆಗೆ, ವಿಧಿಸಿರುವ ದಂಡದ ಮೊತ್ತದಲ್ಲಿ 2 ಲಕ್ಷ ರೂ.ಗಳನ್ನು ಮೃತ ಅರ್ಜುನಗೌಡ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.



