ಕನ್ನಡ ಸಾಹಿತ್ಯ ಪರಿಷತ್ ಸಿರುಗುಪ್ಪ ತಾಲೂಕು ಘಟಕದಿಂದ ಫೆಬ್ರವರಿ 5ರಂದು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗದಿಗೊಳಿಸಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಅಭಯಾಂಜನೇಯ ದೇವಸ್ಥಾನದ ಎದುರು ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು, ಪದಾಧಿಕಾರಿಗಳು ಹಾಗೂ ಸಾಹಿತ್ಯ ಪ್ರೇಮಿಗಳು ತೀರ್ಮಾನಿಸಿದ್ದಾರೆ.
ಸಮ್ಮೇಳನವು ಮುಂಜಾನೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಭುವನೇಶ್ವರಿ ದೇವಿ ಮೆರವಣಿಗೆ ಹಾಗೂ ಸ್ವಾಂತಂತ್ರ್ಯ ಹೋರಾಟಗಾರ ದಿ. ಬೂದಿ ರಾಮಭಟ್ಟರ ಮಹಾದ್ವಾರ, ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ರಂಜಾನ್ ಸಾಬ್ ಪೈಲ್ವಾನ್ ಮಹಾದ್ವಾರ, ಸಂಗೀತ ವಿದ್ವಾಂಸ ದಿ. ಬಸವಾಚಾರ್ಯ ಗವಾಯಿಗಳ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ ಸಾಹಿತ್ಯಗೋಷ್ಠಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಸಂಸ್ಕೃತಿ ಸಾಹಿತ್ಯ ನಾಡು ನುಡಿಗೆ ಸಂಬಂಧಿಸಿದಂತೆ ಶಾಲೆಯ ಮಕ್ಕಳಿಂದ ನೃತ್ಯ ಹಾಗೂ ಹಾಡುಗಳನ್ನು ಏರ್ಪಡಿಸಲಾಗಿದೆ.
ತಾಲೂಕಿನ ಹಿರಿಯ ಸಾಹಿತಿಗಳ ಬರಹ ಸ್ಮರಣಸಂಚಿಕೆ ಬಿಡುಗಡೆಗೊಳ್ಳಲಿವೆ. ವಚನ ಸಾಹಿತ್ಯ ಲೋಕದಲ್ಲಿ ತಮ್ಮದೇ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸಿರುವ ಸಾಹಿತ್ಯ ಪ್ರೇಮಿ, ನಿವೃತ್ತ ಉಪನ್ಯಾಸಕರೂ ಆದ ಶಿವಕುಮಾರ ಎಸ್ ಬಳಿಗಾರ ಅವರನ್ನು 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಚಂದನ ವಾಹಿನಿಯ “ಥಟ್ ಅಂಥ ಹೇಳಿ” ರಸಪ್ರೆಶ್ನೆ ಕಾರ್ಯಕ್ರಮದ ನಿರೂಪಕ ಡಾ. ನಾ ಸೋಮಶ್ವರ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಈ ಓದಿದ್ದಿರಾ?ಬಳ್ಳಾರಿ | ಬಲದಂಡೆ ಕಾಲುವೆಗೆ ನೀರು ಹರಿಸಲು ರೈತ ಸಂಘ ಆಗ್ರಹ
ಸಿರುಗುಪ್ಪ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರು, ಡಾ ಹರೀಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೆ ಎಂ ಚಂದ್ರಕಾಂತ್, ಹಾಸ್ಯ ಕಲಾವಿದ ನರಸಿಂಹ ಮೂರ್ತಿ, ಪರಿಷತ್ತಿನ ಗೌರವ ಕಾರ್ಯದರ್ಶಿ ಗಜೇಂದ್ರ, ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಸಾಹಿತಿಗಳು ಸೇರಿದಂತೆ ತಾಲೂಕಿನ ಪ್ರತಿಯೊಬ್ಬ ಸಾಹಿತ್ಯ ಪ್ರೇಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಕೋರಲಾಗಿದೆ.