ವೀರಶೈವ ಜಂಗಮ ಸಮುದಾಯವನ್ನು ಪರಿಶಿಷ್ಟ ಜಾತಿ ಸಮೀಕ್ಷೆಗೆ ಒಳಪಡಿಸಿ ಎಂದು ಗಣತಿದಾರರನ್ನು ಒತ್ತಾಯಿಸುವ ಹಾಗೂ ಅವರ ಕರ್ತವ್ಯಕ್ಕೆ ಅಡಚಣೆಯುಂಟು ಮಾಡುವ ಕೆಲಸಗಳಿಗೆ ಕೆಲವರು ಮುಂದಾಗಿದ್ದಾರೆ. ಇವರನ್ನು ಬೇಡ ಜಂಗಮ ಎಂದು ಪರಿಶಿಷ್ಟ ಜಾತಿಗೆ ಪರಿಗಣಿಸಬಾರದು ಎಂದು ರಾಜ್ಯ ಎಸ್‌ಸಿ ಎಸ್‌ಟಿ ಅಲೆಮಾರಿ ಬುಡಕಟ್ಟು ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಕುಮಾರ್ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿದ ಅವರು, “ಬೇಡ ಜಂಗಮರು ಸಮಾಜದಲ್ಲಿ ಮೇಲ್ಜಾತಿಯವರೆಂದು ಗುರುತಿಸಿಕೊಂಡಿದ್ದು, ಅವರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಾ ಅತ್ಯಂತ ಉನ್ನತ ಸ್ಥಾನದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಅವರು ಶಾಖಾಹಾರಿಗಳಾಗಿದ್ದು ಈ ಜನಾಂಗ ವೀರಶೈವ ಜಂಗಮ ಸಮುದಾಯದವರು ಎಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ವೀರಶೈವ ಜಂಗಮರು ತಮ್ಮನ್ನು ‘ಬೇಡ ಜಂಗಮರು’ ಎಂದು ಕರೆದುಕೊಳ್ಳುತ್ತ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ವೀರಶೈವ ಜಂಗಮರು ‘ಬೇಡ ಜಂಗಮ’ ಎಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದದ್ದನ್ನು ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದ ನಂತರ ಪ್ರವರ್ಗವಾರು ಪಟ್ಟಿಯನ್ನು ಹೊರಡಿಸಲಾಗಿದೆ. ಈಗ ಪುನಃ ಅದೇ ಮರುಕಳಿಸುವಂತಿದೆ. ಇದರ ಕುರಿತು ಎಚ್ಚರಿಕೆಯ ಕ್ರಮವಹಿಸಬೇಕು” ಎಂದಿದ್ದಾರೆ.
“ನಂತರ ಸರ್ಕಾರದ ಅಧಿಸೂಚನೆಯಂತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರದಿರುವ ಲಿಂಗಾಯತ/ವೀರಶೈವ, ವೀರಶೈವ ಪಂಚಮಶಾಲಿ ಮುಂತಾದ ಉಪಜಾತಿಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿಸಲಾಯಿತು. ಸಾಮಾನ್ಯ ವರ್ಗಕ್ಕೆ ಸೇರಿಸಿದ ವೀರಶೈವ ಲಿಂಗಾಯತ ಉಪಜಾತಿಗಳಲ್ಲಿ ‘ವೀರಶೈವ ಜಂಗಮ’ ಸಮುದಾಯವೂ ಒಂದಾಗಿದೆ. ಸರ್ಕಾರ ಈ ಆದೇಶವನ್ನು ಹೊರಡಿಸಿದ ನಂತರವೂ ಸದರಿ ವೀರಶೈವ ಜಂಗಮ ಸಮುದಾಯದವರು ವಾಮಮಾರ್ಗಗಳ ಮೂಲಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದರಿಂದ ನಿಜವಾದ ಜಂಗಮ ಅಥವಾ ಬೇಡ ಜಂಗಮರಾದ ನಮಗೆ ಅನ್ಯಾಯವಾಗುತ್ತಿದೆ. ಯಾವುದೇ ಕಾರಣಕ್ಕೂ ವೀರಶೈವ ಜಂಗವರನ್ನು ಬೇಡ ಜಗಮ ಎಂದು ಪರಿಗಣಿಸಬಾರದು” ಎಂದು ಮನವಿ ಮಾಡಿದ್ದಾರೆ.
“ವೀರಶೈವ ಜಂಗಮರು ಅಲೆಮಾರಿ ಬುಡ್ಗ ಜಂಗಮರಂತೆ ಅಸ್ಪೃಶ್ಯರ ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯವಲ್ಲ, ಆದರೂ ವೀರಶೈವ ಜಂಗಮರು ತಾವು ‘ಬೇಡ ಜಂಗಮರು’ ಎಂದು ಹೇಳಿಕೊಳ್ಳುತ್ತಾ ನೈಜ ಪರಿಶಿಷ್ಟ ಜಾತಿಗೆ ಸೇರಿದ ಬುಡ್ಗ ಜಂಗಮ ಸಮುದಾಯಕ್ಕೆ ಸಿಗಬೇಕಾದ ಸಾಂವಿಧಾನಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ | ಮನರೇಗಾ ಕಾರ್ಮಿಕರಿಗೆ ಎರಡು ವರ್ಷಗಳಿಂದ ಕೂಲಿ ನೀಡಿಲ್ಲ: ಶಾಂತಮ್ಮ ಅರೋಪ
ಸರಕಾರವು ಈ ಕುರಿತು ತುರ್ತು ಕ್ರಮವಹಿಸದೇ ಇದ್ದಲ್ಲಿ ಆಯೋಗದ ಮೂಲಕ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಾಂತ್ರಿಕವಾದ ಪ್ರಮಾದ ಸಂಭವಿಸುತ್ತದೆ. ಶತಮಾನಗಳ ಕಾಲದಿಂದ ಅಸ್ಪೃಶ್ಯರಾಗಿಯೇ ಬಂದ ನೈಜ ಪರಿಶಿಷ್ಟ ಸಮುದಾಯವಾದ ಬುಡ್ಗ ಜಂಗಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಸಂವಿಧಾನ ಕಲ್ಪಿಸಿರುವ ಸೌಲಭ್ಯಗಳು ಬುಡ್ಗ ಜಂಗಮ ಸಮುದಾಯಕ್ಕೆ ಸಿಗುವುದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಗಂಗಾಧರ, ಗೂಳಪ್ಪ ಅಗ್ನಿ, ಕೊಂಡಪ್ಪ ನಾಗೇಶ್ ಬಾಬು, ಅಜ್ಜಪ್ಪ ಸೇರಿದಂತೆ ಹಲವಾರು ಜನ ಬುಡ್ಗ ಜಂಗಮ ಸಮುದಾಯದವರು ಇದ್ದರು.