ಬಳ್ಳಾರಿ ಜಿಲ್ಲೆ ಸಿರಗುಪ್ಪದ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯಿಂದ ಕೂಡಿದೆ. ಸಂಬಂಧಪಟ್ಟ ಅಧಿಕಾರಿಗಳಾರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿ ನಿಲಯದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿ ಹಲವು ವರ್ಷಗಳೇ ಕಳೆದರೂ ಈ ವರೆಗೂ ದುರಸ್ತಿಯಾಗಗಿಲ್ಲ. ಬಳಕೆಯಾಗದೆ ಶಿಥಿಲಾವಸ್ಥೆತಲುಪಿದೆ.
ಸಂಬಂಧಿಸಿದ ಯಾವ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ. ನಿಲಯ ಪಾಲಕರು ಸಮಸ್ಯೆ ಗೊತ್ತಿದ್ದರೂ, ಗಮನ ಹರಿಸದೇ ಸರ್ಕಾರದ ಹಣ ಪೋಲು ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸರ್ಕಾರವು ಕೋಟ್ಯಾಂತರ ರೂ. ಹಣ ಖರ್ಚುಮಾಡಿ ಕಟ್ಟಡ, ಸೂಕ್ತ ಸೌಲಭ್ಯಗಳನ್ನು ಒದಗಿಸಿದರೆ ಅದನ್ನು ನಿರ್ವಹಿಸದೇ ನಿರ್ಲಕ್ಷಿಸುತ್ತಾ ತಮಗೆ ಬರುವ ಸರ್ಕಾರದ ವೇತನಕ್ಕೆ ಮಾತ್ರ ಅಧಿಕಾರಿಗಳಾಗಿದ್ದಾರೆ ಎಂದು ಪೋಷಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ವಸತಿ ನಿಲಯದ ಸಮಸ್ಯೆಗಳನ್ನು ಯಾಋ ಬಳಿ ಹೇಳಿದರೂ ಅಷ್ಟೇ, ಪ್ರಯೋಜನವಿಲ್ಲ. ನಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಗಾದಿಲಿಂಗಪ್ಪ ಅವರಿಗೆ ಸಾಕಷ್ಟು ಸಲ ದೂರಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ತೋಡಿಕೊಳ್ಳುತ್ತಾರೆ..
ವಸತಿ ನಿಲಯದಲ್ಲಿ ಆಹಾರ ವಿತರಣೆ ಫಲಕದ ಅನುಸಾರ ಊಟವನ್ನು ನೀಡುತ್ತಿಲ್ಲ. ಸರಿಯಾದ ವಿದ್ಯುತ್ ದೀಪಗಳಿಲ್ಲ, ರಾತ್ರಿವೇಳೆ ವಿದ್ಯುತ್ ಹೋದಲ್ಲಿ ಇನ್ವರ್ಟರ್ ಇಲ್ಲ, ನಿಲಯಕ್ಕೆ ಸಿಸಿ ಕ್ಯಾಮೆರಾ ನಾಮ ಮಾತ್ರಕ್ಕೆ ಅಳವಡಿಸಲಾಗಿದೆ. ಅದು ರಿಪೇರಿಯಿದ್ದು ಕೆಲಸಮಾಡುತ್ತಿಲ್ಲ. ನಿಲಯಪಾಲಕ ವೆಂಕಟೇಶ್ ಅವರು ಮಾತ್ರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ.
ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ, ಕೆಲವೊಂದು ಕೊಠಡಿಯಲ್ಲಿ ಒಂದು ಪ್ಯಾನ್ ಇದೆ. ಇನ್ನೂ ಕೆಲವಡೆ ಎರಡೂ ಪ್ಯಾನ್‌ಗಳು ಇಲ್ಲದಿರುವುದರ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಇನ್ನು ಸಮಸ್ಯೆಗಳ ಬಗ್ಗೆ ದೂರಿದವರನ್ನು ಗುರಿಯಾಗಿಸಿ ಬೆದರಿಸುತ್ತಾರೆ ಎಂದು ಆರೋಪಿಸಿದರು.
ವರದಿ | ಖಾಜಾ ಮೈನುದ್ದಿನ