ಕಾಲುವೆಯಲ್ಲಿ ತುಂಬಿರುವ ಕಸ ಕಡ್ಡಿ ಸ್ವಚ್ಛಗೊಳಿಸಿಲ್ಲ. ಪರಿಣಾಮ, ರೈತರ ಜಮೀನುಗಳಿಗೆ ನೀರು ಹೋಗದೆ ತುಂಬಾ ತೊಂದರೆಯಾಗುತ್ತಿದೆ. ತುರ್ತಾಗಿ ಕಾಲುವೆ ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ರೈತ ಸಂಘದ ಕಾರ್ಯಕರ್ತರು ಬಳ್ಳಾರಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಎಂಜನಿಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. “ಚಾಗನೂರು, ಸಂಗನಕಲ್ಲು ಡಿಪಿ ನಂಬರ್ 27ರ ಕಾಲುವೆ ಬೇಲಿ ಮತ್ತು ಕಾಮಗಾರಿ ಪೂರ್ಣಗೊಳಿಸಬೇಕು. ಬಳಿಕ ಕಾಲುವೆಯಲ್ಲಿರುವ ಕಸಕಡ್ಡಿ ಸ್ವಚ್ಛಗೊಳಿಸಬೇಕು” ಎಂದು ಒತ್ತಾಯಿಸಿದರು.
“ಪ್ರತಿ ವರ್ಷವೂ ಕಾಲುವೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಆದರೆ ಈ ಬಾರಿ ಸ್ವಚ್ಛಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಕಾಮಗಾರಿ ಕೆಲಸವನ್ನೂ ಪೂರ್ಣಗೊಳಿಸಿಲ್ಲ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕುವೆಂಪು ವಿವಿ ಘಟಿಕೋತ್ಸವ; ಮೂವರಿಗೆ ಗೌರವ ಡಾಕ್ಟರೇಟ್
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾಲುವೆ ಪರಿಶೀಲಿಸಿ ಆದಷ್ಟು ಬೇಗನೆ ಸ್ವಚ್ಛಗೊಳಿಸಬೇಕು. ಒಂದು ವೇಳೆ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರುಗಳಾದ ಕೃಷ್ಣಮೂರ್ತಿ, ಶೇಖರಪ್ಪ, ಹೇಮಂತ್ ರಾಜ್ ಗಾಳೆಪ್ಪ, ಯು ಸಂಗಪ್ಪ, ಹುಲಗಪ್ಪ, ಹನುಮನ ಗೌಡ ಸೇರಿದಂತೆ ಇತರರು ಇದ್ದರು.